ಯುಪಿಎಸ್ಸಿ ನಿಯಮಾವಳಿ ಕೆಪಿಎಸ್ಸಿಯಲ್ಲಿ ಸೇರಿಸಲು ಸಿಎಂಗೆ ಕಾಂಗ್ರೆಸ್ ಮನವಿ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಸುಧಾರಣೆಗೆ ಸಂಬಂಧಿಸಿದ ಪಿ.ಸಿ.ಹೋಟಾ ಸಮಿತಿಯ ವರದಿ ಮತ್ತು ಕೇಂದ್ರ ಲೋಕಸೇವಾ ಆಯೋಗದ ನಿಯಮಾವಳಿಗಳು, ಪ್ರಕ್ರಿಯೆಗಳನ್ನು ಕೂಡಲೇ ಕೆಪಿಎಸ್ಸಿಯಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಆಯೋಗಕ್ಕೆ ಸೂಕ್ತ ಕಾಯಕಲ್ಪ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷವು ಮನವಿ ಸಲ್ಲಿಸಿದೆ.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ, ಬಿ.ಎಲ್.ಶಂಕರ್, ಡಾ.ಎಲ್.ಹನುಮಂತಯ್ಯ, ಚಂದ್ರಪ್ಪ, ಮುದ್ದಹನುಮೇಗೌಡ, ಪಿ.ಜಿ.ಆರ್.ಸಿಂಧ್ಯಾ, ರಾಣಿ ಸತೀಶ್, ವಿ.ಆರ್.ಸುದರ್ಶನ್, ಪಿ.ಆರ್.ರಮೇಶ್, ಕೊಂಡಜ್ಜಿ ಮೋಹನ್, ಡಾ.ಸಿ.ಎಸ್.ದ್ವಾರಕನಾಥ್ ಸೇರಿದಂತೆ ಪ್ರಮುಖರು, ಇತ್ತೀಚಿನ ದಿನಗಳಲ್ಲಿ ಕೆಪಿಎಸ್ಸಿಯಲ್ಲಿ ನಡೆದಿರುವ ಅಕ್ರಮಗಳಿಂದಾಗಿ ಉದ್ಯೋಗಾಕಾಂಕ್ಷಿಗಳು, ಸಾರ್ವಜನಿಕರು, ಲೋಕಸೇವಾ ಆಯೋಗದ ಮೇಲೆ ನಂಬಿಕೆಯನ್ನು ಕಳೆದುಕೊಂಡು ಆಕ್ರೋಶಭರಿತರಾಗಿದ್ದಾರೆ. ಸರಕಾರದ ಆಡಳಿತದ ಮೇಲೂ ಕೆಟ್ಟ ಪರಿಣಾಮ ಬೀರಿರುತ್ತದೆ. ಹೀಗಾಗಿ ಸರಕಾರ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಮನವಿ ಮಾಡಿದರು.
ತಪ್ಪಿತಸ್ಥ ಅಧ್ಯಕ್ಷ ಮತ್ತು ಸದಸ್ಯರುಗಳನ್ನು ಅನರ್ಹಗೊಳಿಸಲು ಸಂವಿಧಾನದ ಅನುಚ್ಛೇದ 317ರ ಅಡಿಯಲ್ಲಿ ತನಿಖೆಗೆ ಕೂಡಲೇ ರಾಜ್ಯಪಾಲರು, ರಾಷ್ಟ್ರಾಧ್ಯಕ್ಷರ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ವಹಿಸಲು ರಾಜ್ಯ ಸರಕಾರ ಕ್ರಮ ಜರುಗಿಸಬೇಕು ಹಾಗೂ ತನಿಖೆಯ ಅವಧಿಯಲ್ಲಿ ಅಧ್ಯಕ್ಷರು ಮತ್ತು ಕಳಂಕಿತ ಸದಸ್ಯರುಗಳನ್ನು ಅಮಾನತ್ತು ಮಾಡಲು ಕ್ರಮ ವಹಿಸಬೇಕು. ಆಯೋಗದ ತಪ್ಪಿತಸ್ಥ ಪರೀಕ್ಷಾ ನಿಯಂತ್ರಕರನ್ನು ಉದ್ಯೋಗದಿಂದ ಅನರ್ಹಗೊಳಿಸಲು ಮತ್ತು ಶಿಕ್ಷೆಗೆ ಗುರಿಪಡಿಸಲು ಕ್ರಮವಹಿಸಬೇಕು ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪರೀಕ್ಷಾ ನಿಯಂತ್ರಕರಿಂದ ಇತ್ತೀಚೆಗೆ ನೇಮಕ ಆಗಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು. ಆಯೋಗದಲ್ಲಿ ಎಸಗಿರುವ ಭ್ರಷ್ಟಾಚಾರದ ತನಿಖೆಯನ್ನು ಇಡೀ ಆಯೋಗಕ್ಕೆ ವಿಸ್ತ್ರತಗೊಳಿಸಿ ತನಿಖೆ ಕೈಗೊಳ್ಳಬೇಕು. ಅಧ್ಯಕ್ಷರು, ಸದಸ್ಯರು ಮತ್ತು ಪರೀಕ್ಷಾ ನಿಯಂತ್ರಕರು ಇಂತಹ ಭ್ರಷ್ಟಾಚಾರಗಳಿಂದ ಗಳಿಸಿರುವ ಆಸ್ತಿ-ಪಾಸ್ತಿ, ಹಣ-ಒಡವೆಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಆಯೋಗಕ್ಕೆ ನಿಷ್ಟಾವಂತ, ಪ್ರಾಮಾಣಿಕ, ದಕ್ಷ ವ್ಯಕ್ತಿಗಳನ್ನು ಒಳಗೊಂಡ ಸಣ್ಣ ಸಮಿತಿಯನ್ನು ನೇಮಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಕ್ರಮ ವಹಿಸಬೇಕು. ಅಲ್ಲಿಯವರೆಗೂ ಯಾವುದೇ ನೇಮಕಾತಿ ಪ್ರಸ್ತಾವನೆಯನ್ನು ಆಯೋಗಕ್ಕೆ ಕಳುಹಿಸಬಾರದು. ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ನೇಮಕಗೊಳ್ಳುವ ವ್ಯಕ್ತಿಗಳು ನೇಮಕಗೊಂಡಂದಿನಿಂದ ನಿವೃತ್ತಿಗೊಳ್ಳುವವರೆಗಿನ ಅವಧಿಯಲ್ಲಿ ಪ್ರತಿ ವರ್ಷವೂ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಸ್ಥಿರ ಮತ್ತು ಚರಾಸ್ತಿಗಳ ವಿವರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯ ಮಾಡಲಾಗಿದೆ.






