ಪೌರಕಾರ್ಮಿಕರ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚಿಸಿ: ಸಿಎಂಗೆ ಪತ್ರಕರ್ತರ ಬಳಗ ಮನವಿ

ಬೆಂಗಳೂರು : ರಾಜ್ಯದಲ್ಲಿನ ಪೌರಕಾರ್ಮಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಿ, 3 ತಿಂಗಳ ಕಾಲಮಿತಿಯೊಳಗೆ ವರದಿ ಪಡೆದು ಅದನ್ನು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕರಿಗಾಗಿ ಪತ್ರಕರ್ತರು ಬಳಗ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಸೋಮವಾರ ನಗರದಲ್ಲಿ ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್ ಬೂಕನಕೆರೆ, ಎನ್. ರವಿಕುಮಾರ್ ಟೆಲೆಕ್ಸ್, ಮಾರುತಿ ಪಾವಗಡ, ಟಿ.ಗುರುರಾಜ್, ಮಹಾಂತೇಶ ಹಿರೇಮಠ, ಸೋಮಶೇಖರ್ ಕವಚೂರು ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ನಾಗರೀಕ ಸಮಾಜದ ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ ಶ್ರಮ ಅಪೂರ್ವವಾದದ್ದು. ಈ ಸಮಾಜದ ಆರೋಗ್ಯ ರಕ್ಷಣೆಗಾಗಿ ತಮ್ಮ ಆರೋಗ್ಯವನ್ನು ಮುಡಿಪಾಗಿಟ್ಟು ಬದುಕುತ್ತಿರುವ ಪೌರ ಕಾರ್ಮಿಕರು ಸರಕಾರದ ಇತರೆ ಇಲಾಖೆಗಳ ಯಾವ ನೌಕರರಿಗೂ ಮಿಗಿಲಾದ ಸೇವೆಯನ್ನೇ ಮಾಡುತ್ತಿದೆ. ಆದರೆ ಈ ವಲಯವನ್ನು ಸರಕಾರಗಳು ಆದ್ಯತೆಯಿಂದ ಕಾಣದಿರುವುದು ವಿಪರ್ಯಾಸ ಎಂದು ಪತ್ರಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಗಳು ಸೇರಿ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಮತ್ತು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ತಕ್ಷಣವೇ ಖಾಯಂ ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮೆಲ್ಲರ ಆರೋಗ್ಯವನ್ನು ಸದಾ ಕಾಯುತ್ತಿರುವ ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡಲು ಮತ್ತು ಹಕ್ಕುಗಳನ್ನು ದಕ್ಕಿಸಿಕೊಡಲು ಈ ನಾಗರೀಕ ಸಮಾಜ ಕರ್ತವ್ಯ ಪ್ರಜ್ಞೆಯಿಂದಲೂ, ಅಂತಃಕರಣದಿಂದಲೂ ಮುಂದಾಗಬೇಕಿದೆ. ಇದೊಂದು ಋಣ ಸಮರ್ಪಣೆ ಎಂದರೂ ತಪ್ಪಾಗಲಾರದು. ಪೌರಕಾರ್ಮಿಕರು ಮತ್ತು ಇತರೆ ಇಲಾಖೆಗಳ ಸರಕಾರಿ ನೌಕರರ ನಡುವಿನ ತಾರತಮ್ಯವನ್ನು ನಿವಾರಿಸಿ. ಪೌರಕಾರ್ಮಿಕರನ್ನು ಸರಕಾರಿ ನೌಕರರೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೌರಕಾರ್ಮಿಕರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ, ಮೂಲವೇತನವನ್ನು ಹೆಚ್ಚಳ ಮಾಡಬೇಕು. ಪೌರಕಾರ್ಮಿಕರ ಆರೋಗ್ಯ ಕ್ಷಮತೆಯನ್ನು ಕಾಪಾಡಲು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಬೇಕು ಎಂದು ತಿಳಿಸಿದ್ದಾರೆ.
ನಗದು ರಹಿತ ಆರೋಗ್ಯ ಚಿಕಿತ್ಸೆಗೆ ಯೋಜನೆ ಜಾರಿಗೊಳಿಸಬೇಕು. ಕಸ ತುಂಬುವ (ಲೋಡರ್ಸ್) ಸಿಬ್ಬಂದಿ ಮತ್ತು ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ಸಹಾಯಕರು, ಆಪರೇಟರ್‍ಗಳನ್ನು ಹಾಗೂ ಒಳಚರಂಡಿ ಸ್ವಚ್ಚತಾ ಕಾರ್ಮಿಕರನ್ನು ಪೌರಕಾರ್ಮಿಕರೆಂದೇ ಪರಿಗಣಿಸಿ ಅವರನ್ನು ಕೂಡ ಖಾಯಂ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋ ತ್ಸಾಹ ರೂಪಕ ಅನುದಾನವನ್ನು ಮೀಸಲಿಡಬೇಕು. ಪೌರಕಾರ್ಮಿಕರು ಸೇವಾ ಅವಧಿಯಲ್ಲಿ ಮರಣಹೊಂದಿದರೆ ಅವರ ಅಂತ್ಯ ಸಂಸ್ಕಾರವನ್ನು ಸರಕಾರಿ ಗೌರವಗಳೊಂದಿಗೆ ನೆರವೇರಿಸಬೇಕು ಎಂದು ತಿಳಿಸಿದ್ದಾರೆ.






