ಸರಕಾರದ ವಿರುದ್ಧ ಖಾಲಿ ಚೊಂಬು, ತೆಂಗಿನ ಚಿಪ್ಪು ಹಿಡಿದು ಬಿಜೆಪಿ ಪ್ರತಿಭಟನೆ

ಬೆಂಗಳೂರು : ರಾಜ್ಯದ ಆರ್ಥಿಕ ಪರಿಸ್ಥಿತಿ ದುಃಸ್ಥಿತಿ ತಲುಪಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಖಾಲಿ ಚೊಂಬು, ತೆಂಗಿನ ಚಿಪ್ಪು ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಬುಧವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ಜಮಾಯಿಸಿದ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ, ಸುನೀಲ್ ಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿ ಶಾಸಕರು, ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್ ಹಣಕಾಸು ಇಲಾಖೆ ನಿಭಾಯಿಸಲು ಇವರಿಂದ ಆಗುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು. ಅವರಿಗೆ ಹಣಕಾಸು ಇಲಾಖೆಯನ್ನು ನಿಯಂತ್ರಿಸುವ ಶಕ್ತಿ ಇಲ್ಲ. ಇವತ್ತು ಕರ್ನಾಟಕದಲ್ಲಿ ಸರಕಾರ ನಡೆಸುವ ಯೋಗ್ಯತೆಯನ್ನು ನೀವು ಕಳೆದುಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸಿಎಂ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲೇ ಬೇಕು. 4 ಲಕ್ಷಕ್ಕೂ ಹೆಚ್ಚು ಕೋಟಿ ಹೊಸ ಸಾಲವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ 8 ಲಕ್ಷ ಕೋಟಿ ರೂಪಾಯಿ ಸಾಲ ಆಗಿದೆ. ಸಾಲ ಮಾಡಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ನೋಡಲು ಸಾಧ್ಯ ಆಗಿಲ್ಲ. ಮೊನ್ನೆ ಮುಖ್ಯಮಂತ್ರಿಗಳು ಕರಾವಳಿಗೆ ಭೇಟಿ ನೀಡಿದ್ದರು. ಇವರ ಯೋಗ್ಯತೆಗೆ ಖಜಾನೆಯಲ್ಲಿ ಒಂದು ರೂಪಾಯಿ ಹಣ ಇಲ್ಲ. ನಿನ್ನೆ ಹಣಕಾಸಿನ ಇಲಾಖೆಯಿಂದ ಪತ್ರ ಬರೆದಿದ್ದಾರೆ. ಸ್ವಾಮಿ ಮುಖ್ಯಮಂತ್ರಿಗಳೇ ಪುಕ್ಕಟೆ ಯಾವುದೇ ಹೊಸ ಘೋಷಣೆಗಳನ್ನು ಮಾಡಬೇಡಿ ಎಂದರು.






