ಮದುವೆ ಮಂಟಪದಲ್ಲಿ ‘ಕಾಬಾದ ನೆರಳಿನಲ್ಲಿ’ ಕೃತಿ ಲೋಕಾರ್ಪಣೆ

ಬೆಂಗಳೂರು : ಕುರ್‌ಆನ್, ಭಗವದ್ಗೀತೆ, ಬೈಬಲ್ ಮುಂತಾದ ಪವಿತ್ರ ಧಾರ್ಮಿಕ ಗ್ರಂಥಗಳು ಕೌಟುಂಬಿಕ ಜೀವನಕ್ಕೆ ದಾರಿದೀಪವಾಗಿವೆ. ದಾಂಪತ್ಯಕ್ಕೆ ಕಾಲಿಡುವ ವಧು-ವರರು ತಮ್ಮ ಧಾರ್ಮಿಕ ಪವಿತ್ರ ಗ್ರಂಥಗಳನ್ನು ತಿಳಿದುಕೊಂಡರೆ ಅವರ ಜೀವನ ಮಾರ್ಗ ಅನುಕರಣೀಯವಾಗುವುದು ಎಂದು ಹರಪ್ಪನಹಳ್ಳಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಎನ್.ಎಂ.ನೂರಹ್ಮದ್ ಕರೆ ನೀಡಿದ್ದಾರೆ.
ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಅಬ್ದುಲ್ ಸಾಲೆಹಾ ಅವರ ಪುತ್ರ ಡಿ.ನಯಾಝ್ ಹಾಗೂ ಅಹ್ಮದಸಾಬ್‌ರ ಪುತ್ರಿ ಸಲೀಮಾ ಅವರ ವಿವಾಹ ಮಂಟಪದಲ್ಲಿ ದೂರದರ್ಶನ ಕೇಂದ್ರದ ನಿವೃತ್ತ ಉದ್ಯೋಗಿ ಜಿ.ಎಂ. ಶಿರಹಟ್ಟಿ ಅವರ ‘ಕಾಬಾದ ನೆರಳಿನಲ್ಲಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ನಮ್ಮ ಎಲ್ಲ ಧಾರ್ಮಿಕ ಪವಿತ್ರ ಗ್ರಂಥಗಳು ನಮ್ಮನ್ನು ನೀತಿವಂತರನ್ನಾಗಿ ಮಾಡುವುದಲ್ಲದೆ, ಸಮಾಜದ ಕೌಟುಂಬಿಕ ಶಾಂತಿ ಸಹಬಾಳ್ವೆಯನ್ನು ಕಲಿಸುತ್ತವೆ. ಮದುವೆ ಕೇವಲ ಆಡಂಬರದ ಸಂಭ್ರಮಾಚರಣೆ ಆಗದೆ ಇಂತಹ ಗ್ರಂಥಗಳ ಲೋಕಾರ್ಪಣೆಯಾಗುತ್ತಿರುವುದು ಶುಭ ಲಕ್ಷಣ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೌಲಾನ ಇಮ್ತಿಯಾಝ್, ಮೌಲಾನ ದಾದಾಪೀರ, ಮೌಲಾನ ಗುಲಾಮ್ ರಬ್ಬಾನಿ, ಹಾಫಿಝ್ ಹೈದರ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಸಂತಪ್ಪ, ರಾಜಣ್ಣ, ಡಿ.ಮೋತಿ ನಾಯಕ, ಹಾಲೇಶ, ಗೌಸ್, ಬಶೀರಾ, ಆಶಾ ಪರ್ವಿನ್, ಹಾಶಿಮಾ ರಫೀಕ್, ಮುಬಿನಾ, ಸಾಹಿರಾ ಮೆಹಬೂಬ ಹಾಗೂ ಕೃತಿಯ ಲೇಖಕ ಜಿ.ಎಂ.ಶಿರಹಟ್ಟಿ ಹಾಜರಿದ್ದರು.






