‘ಎಸ್ಐಆರ್ ಅಕ್ರಮ’ | ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು : ಪ್ರೊ.ಸಲೀಂ ಇಂಜಿನಿಯರ್

ಬೆಂಗಳೂರು : ದೇಶದಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿ, ಸಂವಿಧಾನ ವಿರೋಧಿ ನಡೆ ಅನುಸರಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ಸಲೀಂ ಇಂಜಿನಿಯರ್ ಆಗ್ರಹಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಮತದಾನದ ಹಕ್ಕಿನ ರಕ್ಷಣೆ ಕುರಿತು ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಎಸ್ಐಆರ್ ಮೂಲಕ ಸುಮಾರು 13 ಕೋಟಿ ಮತದಾರರ ಹೆಸರನ್ನು ಚುನಾವಣಾ ಆಯೋಗ ಕೈ ಬಿಟ್ಟಿದೆ ಎಂದು ಹೇಳಿದರು.
ಎಸ್ಐಆರ್ನಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ದಿಲ್ಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಮುಖ್ಯ ಚುನಾವಣಾ ಆಯುಕ್ತರು ಎಸ್ಐಆರ್ ಪ್ರಕ್ರಿಯೆಯಲ್ಲಿ ನಿರ್ವಹಿಸಿದ ಪಾತ್ರ ನಿಜಕ್ಕೂ ಚಿಂತಾಜನಕವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆದಂತಹ ದಾಳಿ. ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುವ ಹುನ್ನಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭಿಸಿದಾಗಲೆ ನಾವು ವಿರೋಧಿಸಿದೆವು. ತರಾತುರಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುವ ಅಗತ್ಯವೇನಿತ್ತು? ಚುನಾವಣಾ ಆಯೋಗವನ್ನು ಬಳಸಿಕೊಂಡು ಮುಸ್ಲಿಮರು, ದಲಿತರು, ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಬಡವರ ಮತದಾನದ ಹಕ್ಕನ್ನು ಕಸಿಯಲಾಗಿದೆ. ಆಡಳಿತ ಪಕ್ಷದ ಅಣತಿಯಂತೆ ಮತಪಟ್ಟಿಯಿಂದ ಮತದಾರರನ್ನು ಕೈ ಬಿಟ್ಟಿರುವುದು ಸ್ಪಷ್ಟವಾಗಿದೆ ಎಂದು ಅವರು ದೂರಿದರು.
ಜ್ಞಾನೇಶ್ ಕುಮಾರ್ ಈ ಅಪರಾಧದಲ್ಲಿ ಭಾಗಿಯಾಗಿದ್ದು, ಸೂಕ್ತ ತನಿಖೆಯಾಗಬೇಕು. ಅಲ್ಲದೇ, ಯಾರಿಗಾಗಿ ಈ ಪ್ರಕ್ರಿಯೆಯನ್ನು ಮಾಡಲಾಯಿತೋ ಅವರನ್ನು ಕಾನೂನು ಕ್ರಮಕ್ಕೆ ಗುರಿಯಾಗಿಸಬೇಕು. ಪಶ್ಚಿಮ ಬಂಗಾಳದಲ್ಲಿ 28 ಲಕ್ಷ ಮತದಾರ ಹೆಸರನ್ನು ಕೈ ಬಿಡಲಾಯಿತು. ಆನಮಂತರ, ಒಂದು ಲಕ್ಷ ಮತದಾರರ ಅರ್ಜಿಗಳನ್ನು ಪುರಸ್ಕರಿಸಿ ಶೇ.93 ರಷ್ಟು ಮತದಾರರ ಹೆಸರುಗಳನ್ನು ಪುನಃ ಸೇರ್ಪಡೆ ಮಾಡಲಾಯಿತು ಎಂದು ಅವರು ತಿಳಿಸಿದರು.
ದೊಡ್ಡ ಪ್ರಮಾಣದಲ್ಲಿ ಮತದಾರರಿಂದ ಮತದಾನದ ಹಕ್ಕನ್ನು ಕಸಿದು, ನಡೆಸಿರುವ ಚುನಾವಣೆಗಳು ಸಂವಿಧಾನ ಬಾಹಿರ ಎಂದು ಆರೋಪಿಸಿದ ಸಲೀಂ ಇಂಜಿನಿಯರ್, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಆಡಳಿತವಿರುವ ದಿಲ್ಲಿ, ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ರಸ್ತೆ ಅಗಲೀಕರಣ, ಅಕ್ರಮ ನಿರ್ಮಾಣ ಸೇರಿದಂತೆ ಇನ್ನಿತರ ಕಾರಣಗಳನ್ನು ನೀಡಿ, ಸುಪ್ರೀಂಕೋರ್ಟ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಸೀದಿ, ಚರ್ಚ್ಗಳನ್ನು ಧ್ವಂಸ ಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ಅಲ್ಪಸಂಖ್ಯಾತರ ಭಾವನೆ ಕೆರಳಿಸಿ, ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇಂತಹ ಪ್ರಕರಣಗಳಲ್ಲಿಯೂ ಸ್ವತಂತ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಅಕ್ರಮವಾಗಿ ಆರಾಧನಾ ಸ್ಥಳಗಳನ್ನು ಧ್ವಂಸ ಮಾಡಿದವರಿಗೆ ಆರ್ಥಿಕ ದಂಡವನ್ನು ವಿಧಿಸಬೇಕು ಎಂದು ಸಲೀಂ ಇಂಜಿನಿಯರ್ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ತೀರ್ಮಾನ, ನೀತಿಗಳನ್ನು ಪ್ರಶ್ನಿಸಲು, ಪ್ರತಿಭಟಿಸಲು ಸಂವಿಧಾನ ಅವಕಾಶ ನೀಡಿದೆ. ಆದರೆ, ಇಂದು ಶಾಂತಿಯುತವಾಗಿ ನಡೆಸುವ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಪೊಲೀಸ್ ಸಮವಸ್ತ್ರದಲ್ಲಿರುವ ಅನಾಮಧೇಯರು ಹಲ್ಲೆ ಮಾಡುತ್ತಿರುವ ಘಟನೆಗಳು ಜಗಜ್ಜಾಹೀರಾಗಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ರಾಜ್ಯ ಕಾರ್ಯದರ್ಶಿಗಳಾದ ಮುಹಮ್ಮದ್ ಕುಂಞ, ಅಕ್ಬರ್ ಅಲಿ ಉಡುಪಿ, ಮಾಧ್ಯಮ ವಿಭಾಗ ಕಾರ್ಯದರ್ಶಿ ಲಬೀದ್ ಶಾಫಿ, ಸಹ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಉಪಸ್ಥಿತರಿದ್ದರು.






