ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಬಕಾರಿ ಗಾರ್ಡ್ಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ photo: magnific
ಬೆಂಗಳೂರು : ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿವೃತ್ತ ಅಬಕಾರಿ ಗಾರ್ಡ್ ಹಾಗೂ ಅವರ ಮಗಳಿಗೆ ನಗರದ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ನಿವೃತ್ತ ಅಬಕಾರಿ ಗಾರ್ಡ್ ಹಾಗೂ ಪ್ರಭಾರ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಎಂ. ರಾಮಚಂದ್ರ ಅವರಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಕರಣದ ಎರಡನೇ ಆರೋಪಿಯಾಗಿರುವ ಅವರ ಮಗಳು ಆರ್. ಯುವರೇಖಾ ಅವರಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಎಂ. ರಾಮಚಂದ್ರ ಅವರು 1977ರಿಂದ 2009ರವರೆಗಿನ ಪರಿಶೀಲನಾ ಅವಧಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2009ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ 2012ರಲ್ಲಿ ಲೋಕಾಯುಕ್ತ ಪೊಲೀಸರು ಸುಮಾರು 1.79 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿದ್ದರು.
ಸಿಟಿ ಮಾರ್ಕೆಟ್ ವಲಯದಲ್ಲಿ ಪ್ರಭಾರ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ರಾಮಚಂದ್ರ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಆದಾಯಕ್ಕೂ ಮೀರಿದ ಆಸ್ತಿ ಸಂಪಾದಿಸಿದ್ದರು. ಅಲ್ಲದೆ, ತಮ್ಮ ಮಗಳ ಹೆಸರಿನಲ್ಲಿಯೂ ಆಸ್ತಿಗಳನ್ನು ಖರೀದಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ಹಾಗೂ 47ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ್ ಜೆ. ಬಾಲಿ ಅವರು ಈ ತೀರ್ಪು ಪ್ರಕಟಿಸಿದ್ದಾರೆ.






