ಕಲೇಸಂ: ಇಂದಿರಾ ರತ್ನ ದತ್ತಿ ಪ್ರಶಸ್ತಿಗೆ ಲಲಿತಮ್ಮ, ಡಾ.ಮೀರಾ ಆಯ್ಕೆ

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನೀಡುವ ಇಂದಿರಾ ರತ್ನ ದತ್ತಿ ಪ್ರಶಸ್ತಿಗೆ ಲಲಿತಮ್ಮ ಡಾ. ಚಂದ್ರಶೇಖರ್ ಹಾಗೂ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಲೇಸಂ ಅಧ್ಯಕ್ಷೆ ಪ್ರೊ. ಆರ್.ಸುನಂದಮ್ಮ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂದಿರಾ ರತ್ನ ದತ್ತಿ ಪ್ರಶಸ್ತಿಯನ್ನು ಸಾಹಿತ್ಯಾಸಕ್ತರೂ, ಕಲೇಸಂ ಅಭಿಮಾನಿಗಳೂ ಆದ ತುಮಕೂರಿನ ರಾಜನ್ ಅವರು ತಮ್ಮ ಸಹೋದರಿಯರಾದ ಇಂದಿರಾ ಮತ್ತು ರತ್ನ ಅವರ ಹೆಸರಿನಲ್ಲಿ ಕಲೇಸಂನಲ್ಲಿ ದತ್ತಿಯನ್ನು ಇಟ್ಟಿದ್ದಾರೆ. ಲೇಖಕಿಯೂ ಆಗಿದ್ದು, ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ತೀರ್ಪುಗಾರರಾಗಿ ಆರ್.ಸುನಂದಮ್ಮ, ಸುಮಾ ಸತೀಶ್, ಲಲಿತಾ ಹೊಸಪ್ಯಾಟಿ, ಅನುರಾಧ ಬಿ.ಟಿ ಹಾಗೂ ಅನಸೂಯಾ ಹೊಂಬಾಳೆ ಅವರಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ.2 ರಂದು ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.




