ಯಕ್ಷಗಾನ ಡಿಜಿಟಲೀಕರಣಗೊಳ್ಳಲಿ : ಡಾ.ಪುರುಷೋತ್ತಮ ಬಿಳಿಮಲೆ
ಕರ್ನಾಟಕ ಯಕ್ಷಗಾನ ಅಕಾಡಮಿಯ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು : ಯಾವುದೇ ದೇಶದಲ್ಲಿರುವವರಿಗೆ ಯಕ್ಷಗಾನದ ಬಗ್ಗೆ ಕುಳಿತಲ್ಲೇ ಮಾಹಿತಿ ಸಿಗಬೇಕು. ನೂರಾರು ಯಕ್ಷಗಾನದ ಧ್ವನಿ ಮುದ್ರಣಗಳಿವೆ. ಮಂಗಳೂರು ವಿವಿಯಲ್ಲಿ ಯಕ್ಷಗಾನದ ವಸ್ತು ಪ್ರದರ್ಶನ ಕೇಂದ್ರವಿದೆ. ಅವುಗಳನ್ನು ಡಿಜಿಟಲೀಕರಣಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, 1990ರ ನಂತರ ಮೊಬೈಲ್ ಬಂದ ಮೇಲೆ ಯಕ್ಷಗಾನದ ವೀಡಿಯೊ, ಆಡಿಯೊಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ 1990ಕ್ಕಿಂತ ಹಿಂದೆ ದೊಡ್ಡ ದೊಡ್ಡ ಯಕ್ಷಗಾನ ಕಲಾವಿದರು ಇದ್ದರು ಅವರೆಲ್ಲರೂ ಇತಿಹಾಸ. ಅವುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕಿದೆ ಎಂದು ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನ ಬಹಳ ವೇಗವಾಗಿ ಮುಂದುವರಿಯುತ್ತಿದೆ. ಯಕ್ಷಗಾನವನ್ನು ಆಧುನಿಕ ಬೆಳವಣಿಗೆಗೆ ತಕ್ಕಂತೆ ಒಗ್ಗಿಸಿ, ಸಂರಕ್ಷಿಸಲು ಸರಕಾರ ಮುಂದಾಗಿದೆ. ಅದಕ್ಕೆ ಎಲ್ಲರ ಬೆಂಬಲ ಬೇಕು. ಯಕ್ಷಗಾನ ಕಲಾವಿದರಿಗೆ ಗೌರವ ಕೊಡಬೇಕು ಎನ್ನುವುದು ಅದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕಲಾವಿದರಿಗೆ 2026ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿಯ ಪ್ರದಾನ ಹಾಗೂ ಯಕ್ಷಗಾನ ಅಕಾಡಮಿ ಪ್ರಕಟಿಸಿರುವ ಮೂಡಲಪಾಯ ಕವಿ ಕಾವ್ಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ, ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಯಕ್ಷಗಾನ ಅಕಾಡಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಮತ್ತಿತರರು ಉಪಸ್ಥಿತರಿದ್ದರು.






