ಕಸದ ವಾಹನ ಸಿಬ್ಬಂದಿಯ ನಕಲಿ ಹಾಜರಾತಿಗೆ ಕಡಿವಾಣ: ಇನ್ಮುಂದೆ ‘ಫೇಸ್ ರೆಕಗ್ನಿಷನ್’ ಕಡ್ಡಾಯ ಎಂದ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ತೊಡಗುವ ಕೆಲ ಕಸದ ವಾಹನಗಳ ಸಿಬ್ಬಂದಿ ಕೆಲಸಕ್ಕೆ ಬಾರದೆ ನಕಲಿ ಹಾಜರಾತಿ ತೋರಿಸಿರುವುದು ಕಂಡುಬಂದಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಫೇಸ್ ರೆಕಗ್ನಿಷನ್(ಮುಖ ಗುರುತಿಸುವಿಕೆ) ಹಾಗೂ ಜಿಪಿಎಸ್ ಮೂಲಕ ಕಸದ ವಾಹನಗಳ ಟ್ರ್ಯಾಕಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಕಸದ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಸ ಸಂಗ್ರಹ ಸಾಮಥ್ರ್ಯ ಹೆಚ್ಚಿರುವ ವಾಹನಗಳಿಗೆ ಆದ್ಯತೆ ನೀಡಲಾಗಿದೆ. ಹೊಸ ವಾಹನದಲ್ಲಿ ಜಿಪಿಎಸ್ ಇರುವುದರಿಂದ ಸಿಬ್ಬಂದಿಗಳ ಕಳ್ಳಾಟಕ್ಕೆ ಕಡಿವಾಣ ಬೀಳಲಿದೆ. ಆ ಮೂಲಕ ಹೆಚ್ಚು ಕಸ ಸಂಗ್ರಹ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಇನ್ನು ಹಳೆಯ ವಾಹನದ ಬದಲು ಹೊಸ ವಾಹನ ಖರೀದಿ ಮಾಡಬೇಕು. ಪ್ರತಿ ವಾಹನದಲ್ಲೂ ಜಿಪಿಎಸ್ ಕಡ್ಡಾಯವಾಗಿ ಇರಬೇಕೆಂದು ಟೆಂಡರ್ ಕೊಡುವಾಗಲೇ ಷರತ್ತು ಹಾಕಿದ್ದೇವೆ. ಗುತ್ತಿಗೆದಾರರು ಒಂದೂವರೆ ತಿಂಗಳು ಸಮಯ ಕೇಳಿದ್ದಾರೆ. 5 ಪ್ಯಾಕೇಜ್ ವರ್ಕ್ ಆರ್ಡರ್ ಆಗಿದೆ. ಸಚಿವ ಸಂಪುಟದಲ್ಲಿ 10 ಪ್ಯಾಕೇಜ್‍ಗೆ ಅನುಮೋದನೆ ನೀಡಿದರೆ ಅವರಿಗೂ ಕೆಲಸದ ಆದೇಶ ಮಾಡುತ್ತೇವೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
ನಗರದಲ್ಲಿ ರಸ್ತೆ ಸಮಸ್ಯೆ, ಕಸದ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಗುಂಡಿಗಳ ಸಮಸ್ಯೆ, ಬೀದಿ ದೀಪಗಳು ಸರಿಪಡಿಸಲು ಸೂಚನೆ ಕೊಟ್ಟಿದ್ದೇನೆ. ಮಳೆಯಿಂದ ಮರಗಳು ಫುಟ್‍ಪಾತ್ ಮೇಲೆ ಬಿದ್ದಿದ್ದರೆ ಎತ್ತುವ ಕೆಲಸವಾಗಬೇಕಿದೆ. ಇದನ್ನು ನವೆಂಬರ್ 1ರಂದು ಆರಂಭ ಮಾಡಿ 30ರೊಳಗೆ ಮಾಡಬೇಕು ಎಂದು ಕೃಷ್ಣಬೈರೇಗೌಡ ತಿಳಿಸಿದರು.






