ಮಲ್ಲಿಕಾರ್ಜುನ ಖರ್ಗೆ ಕುರಿತಂತೆ ವೈಯಕ್ತಿಕ ನಿಂದನೆ; ಆರ್.ಅಶೋಕ್ ಬೇಷರತ್ ಕ್ಷಮೆಯಾಚನೆಗೆ ಈಶ್ವರ್ ಖಂಡ್ರೆ ಒತ್ತಾಯ

ಬೆಂಗಳೂರು : ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಡೆಯುವ ರೀತಿ ಕುರಿತಂತೆ ವೈಯಕ್ತಿಕ ನಿಂದನೆ ಮಾಡಿರುವ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಪಂಚೆಯ ಪ್ರಸ್ತಾಪವನ್ನೂ ಮಾಡಿ, ಅವಹೇಳನೆ ಮಾಡಿರುವ ಅಶೋಕ್ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದು ಬಿಜೆಪಿಯ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ. ಇದು ಖಂಡನೀಯ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆದುಕೊಂಡು ಬಂದು ಕುರ್ಚಿಯಲ್ಲಿ ಕೂರಿಸುವ ಸ್ಥಿತಿ ಬಂದಿದೆ ಎಂದೆಲ್ಲಾ ಅಶೋಕ್ ಮಾತನಾಡಿದ್ದಾರೆ. ಯಾವುದೇ ಹಿರಿಯ ವ್ಯಕ್ತಿಗಳ ವೈಯಕ್ತಿಕ ನಿಂದನೆ ಮಾಡುವುದು ಕೀಳು ರಾಜಕೀಯದ ಪರಮಾವಧಿ ಎಂದು ಅವರು ಕಿಡಿಕಾರಿದ್ದಾರೆ.
ಮಾಜಿ ಸಚಿವ ಆರಗ ಜ್ಞಾನೇಂದ್ರ ಕೂಡ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆಯವರ ವೈಯಕ್ತಿಕ ನಿಂದನೆ ಮಾಡಿದ್ದರು. ರಾಜ್ಯದ ನಾನಾ ಕಡೆ ಪ್ರತಿಭಟನೆ ನಡೆದು, ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾದ ಬಳಿಕ ಕ್ಷಮೆ ಕೇಳಿದರು. ಇದು ಬಿಜೆಪಿಯ ಚಾಳಿ. ಹಿರಿಯರ ಬಗ್ಗೆ ಅವಹೇಳನ ಮಾಡುವುದೇ ಅವರ ಸಂಸ್ಕೃತಿ. ಕೂಡಲೇ ಆರ್.ಅಶೋಕ್ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಈಶ್ವರ್ ಖಂಡ್ರೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.






