ಬೆಂಗಳೂರು: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನಕ್ಕೆ ಅಡ್ಡಿ; ಆರೋಪ
ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದ ಪ್ರತಿಭಟನಾಕಾರರು

ಬೆಂಗಳೂರು: ನಗರದ ಸುಚಿತ್ರ ಅಕಾಡೆಮಿಯಲ್ಲಿ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನದ ವೇಳೆ ಗದ್ದಲ ಉಂಟಾಗಿದ್ದು, ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದ ಘಟನೆ ಶನಿವಾರ ನಡೆದಿದೆ.
ಅಕ್ಟೋಬರ್ 31ರಂದು ಕೊಡಗಿನ ರಂಗಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಅಡ್ಡಂಡ ಕಾರ್ಯಪ್ಪ ಅವರು ರಚಿಸಿ, ನಿರ್ದೇಶಿಸಿರುವ ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತು ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಸಂಭಾಷಣೆಗಳಿವೆ ಎಂದು ಆರೋಪಿಸಿ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಥಾಹಂದರವನ್ನು ಪ್ರಶ್ನಿಸಿದ ಪ್ರೇಕ್ಷಕರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಗಿದೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದು ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಹಾಗೂ ನಾಟಕದ ಆಯೋಜಕರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.




