ಶಿಕ್ಷಕರ ವೃತ್ತಿ ಗೌರವಕ್ಕೆ ಧಕ್ಕೆ; ಸಿಎಂ ಪುತ್ರಿ ಐಶ್ವರ್ಯಾ ಕ್ಷಮೆಯಾಚನೆಗೆ ಆಗ್ರಹ

ಐಶ್ವರ್ಯಾ
ಬೆಂಗಳೂರು : ಸರಕಾರಿ ಶಾಲಾ ಶಿಕ್ಷಕರ ಬೋಧನಾ ಗುಣಮಟ್ಟ ಮತ್ತು ಕರ್ತವ್ಯ ನಿಷ್ಠೆಯ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದ್ದು, ಶಿಕ್ಷಕ ಸಮುದಾಯದ ಗೌರವಕ್ಕೆ ಉಂಟಾಗಿರುವ ಧಕ್ಕೆಗೆ ವಿಷಾದ ವ್ಯಕ್ತಪಡಿಸಿ, ಸಮಸ್ತ ಶಾಲಾ ಶಿಕ್ಷಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎ.ಪಿ.ರಂಗನಾಥ್ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಕರ ಬಗ್ಗೆ ಹಗುರವಾಗಿ ಮಾತನಾಡುವ ಬದಲು, ಅವರ ಸೇವಾ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ತಮ್ಮ ಕೊಡುಗೆಯನ್ನು ನೀಡಬೇಕೆಂದು ಐಶ್ವರ್ಯ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯ ಮತ್ತು ಸೌಲಭ್ಯಗಳನ್ನು ಸರಕಾರಿ ಶಾಲೆಗಳೊಂದಿಗೆ ಹೋಲಿಸಿ, ಸರಕಾರಿ ಶಿಕ್ಷಕರ ಸಾಮರ್ಥ್ಯ ಅಥವಾ ಬದ್ಧತೆಯನ್ನು ಪ್ರಶ್ನಿಸುವುದು ಸಮಂಜಸವಲ್ಲ. ಖಾಸಗಿ ಶಿಕ್ಷಣವು ಒಂದು ಆಯ್ಕೆಯಾಗಿರಬಹುದು. ಆದರೆ ಸಾರ್ವಜನಿಕ ಶಿಕ್ಷಣವು ಸಂವಿಧಾನಾತ್ಮಕ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಎ.ಪಿ.ರಂಗನಾಥ್ ಹೇಳಿದ್ದಾರೆ.
ಸರಕಾರಿ ಶಾಲೆಗಳ ಕಾರ್ಯನಿರ್ವಹಣೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ಬದಲು ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಹೇಳಿಕೆಗಳು ಇಂತಹ ಆತಂಕಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತವೆ ಎಂದು ಎ.ಪಿ.ರಂಗನಾಥ್ ಖಂಡಿಸಿದ್ದಾರೆ.






