ಹಾಲಿನ ದರ ಏರಿಕೆ ಸಮರ್ಥಿಸಿಕೊಂಡ ರೈತ ಮುಖಂಡರು, ಕೃಷಿ ಆರ್ಥಿಕ ತಜ್ಞರು
ಹೈನುಗಾರರ ಹಿತದೃಷ್ಟಿಯಿಂದ ದರ ಪರಿಷ್ಕರಣೆ ಅನಿವಾರ್ಯ : ಪ್ರಕಾಶ್ ಕಮ್ಮರಡಿ

ಬೆಂಗಳೂರು : ಹೈನುಗಾರರ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಲಿನ ಖರೀದಿ ದರ ಪರಿಷ್ಕರಣೆ ಮಾಡಿರುವುದು ಸಮರ್ಥನೀಯ ಎಂದು ಕೃಷಿ ಆರ್ಥಿಕ ತಜ್ಞ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 27ಲಕ್ಷ ನೋಂದಾಯಿತ ಸದಸ್ಯರನ್ನು ಹೊಂದಿರುವ ಕೆಎಂಎಫ್ ವ್ಯವಸ್ಥೆಯಡಿ 16 ಜಿಲ್ಲಾ ಹಾಲು ಒಕ್ಕೂಟಗಳು, 15,885 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಸುಮಾರು 25 ಸಾವಿರ ಹಳ್ಳಿಗಳಲ್ಲಿ ವ್ಯಾಪಿಸಿರುವ ಈ ವ್ಯವಸ್ಥೆ ದಿನಕ್ಕೆ ಸುಮಾರು ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, 9 ಲಕ್ಷಕ್ಕೂ ಹೆಚ್ಚು ಸಕ್ರಿಯ ಉತ್ಪಾದಕರಿಗೆ ಆದಾಯದ ಮೂಲವಾಗಿದೆ ಎಂದರು.
ಹಸುಗಳ ನಿರ್ವಹಣೆ, ಪಶು ಆಹಾರ, ಮೇವು, ಕಾರ್ಮಿಕರು ಮತ್ತು ಪಶುವೈದ್ಯಕೀಯ ವೆಚ್ಚಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಹಾಲಿನ ಖರೀದಿ ದರವನ್ನು ಲೀಟರ್ಗೆ 35 ರೂ.ನಿಂದ 42 ರೂ.ಗೆ ಹೆಚ್ಚಿಸಲಾಗಿದೆ. ಹೆಚ್ಚುವರಿ 7 ರೂ. ಜೊತೆಗೆ ಈಗಾಗಲೇ ನೀಡಲಾಗುತ್ತಿರುವ 5 ರೂ. ಪ್ರೋತ್ಸಾಹಧನ ಸೇರಿ ಉತ್ಪಾದಕರಿಗೆ ಲೀಟರ್ಗೆ ಒಟ್ಟು 47 ರೂ. ದೊರೆಯಲಿದೆ. ಹಾಲು ಒಕ್ಕೂಟಗಳ ನಿರ್ವಹಣೆಗಾಗಿ ಹೆಚ್ಚುವರಿಯಾಗಿ ಒಂದು ರೂಪಾಯಿ ಮೀಸಲಿಡಲಾಗಿದೆ. ಸರಕಾರದ ಪ್ರೋತ್ಸಾಹಧನದ ನೆರವಿಲ್ಲದಿದ್ದರೆ ಹೈನುಗಾರಿಕೆ ನಷ್ಟದ ಕಸುಬಾಗುವ ಸಾಧ್ಯತೆಯಿದೆ ಎಂದು ಪ್ರಕಾಶ್ ಕಮ್ಮರಡಿ ಹೇಳಿದರು.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಹಾಲು ಮತ್ತು ಮೊಸರನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ತರಬೇಕು. ವಿದೇಶಿ ಹೈನು ಉತ್ಪನ್ನಗಳ ಆಮದಿನ ಸಂದರ್ಭದಲ್ಲಿ ದೇಶೀಯ ರೈತರ ಹಿತಾಸಕ್ತಿ ಕಾಪಾಡಬೇಕು ಹಾಗೂ ಹಾಲಿನ ದರ ಏರಿಕೆಯ ನೆಪದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.






