ಸರಕಾರಿ ಶಾಲೆಗಳ ಖಾಸಗೀಕರಣದ ಹುನ್ನಾರ ಖಂಡನೀಯ : ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ಸರಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಾಫಿಯಾಗಳಿಗೆ ಒಪ್ಪಿಸುವ ಹುನ್ನಾರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ಖಾಸಗಿ ಶಾಲೆಗಳ ಪರವಾಗಿ ರಾಜ್ಯ ಸರಕಾರ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಹಿರಂಗವಾಗಿ ಹೇಳಿರುವುದು ರಾಜ್ಯದ ಸರಕಾರಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ಸರಕಾರಕ್ಕಿರುವ ನೈಜ ಕಾಳಜಿಯನ್ನು ಬಯಲು ಮಾಡಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ರಾಜ್ಯದ ಸರಕಾರಿ ಶಾಲೆಗಳ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳು ಹಾಗೂ ಲಕ್ಷಾಂತರ ಎಕರೆ ಜಮೀನು ದತ್ತು ನೀಡುವ ನೆಪದಲ್ಲಿ ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಶಿಕ್ಷಣ ಸುಧಾರಣೆಯಲ್ಲ, ಬದಲಾಗಿ ಸರಕಾರಿ ಆಸ್ತಿಗಳನ್ನು ಖಾಸಗಿ ಹಿತಾಸಕ್ತಿಗಳಿಗೆ ಧಾರೆ ಎರೆಯುವ ಅಪಾಯಕಾರಿ ರಿಯಲ್ ಎಸ್ಟೇಟ್ ದಂಧೆಗೆ ಮುನ್ನುಡಿ ಬರೆದಂತಾಗಿದೆ ಎಂದು ಆರೋಪಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಿ, ಮತ್ತೊಂದೆಡೆ ಮ್ಯಾಗ್ನೆಟಿಕ್ ಸ್ಕೂಲ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳ ಹೆಸರಿನಲ್ಲಿ ಶಾಲೆಗಳ ವಿಲೀನ ಮತ್ತು ಪುನರ್ವ್ಯವಸ್ಥೆಯ ಮೂಲಕ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆ ತರುವ ನೀತಿಯನ್ನು ಸರಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು ಅಥವಾ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಸರಕಾರಿ ಶಾಲೆಗಳು ಸರಕಾರದ ಆಸ್ತಿ ಮಾತ್ರವಲ್ಲ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ಭರವಸೆಯಾಗಿವೆ. ಅವುಗಳನ್ನು ಖಾಸಗಿ ಶಿಕ್ಷಣ ಮಾಫಿಯಾಗಳಿಗೆ ಒಪ್ಪಿಸುವ ಪ್ರಯತ್ನ ಖಂಡನೀಯ. ರಾಜ್ಯದ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯ ವಿರುದ್ಧ ರಾಜ್ಯಾದ್ಯಂತ ಜನಜಾಗೃತಿ ಮತ್ತು ಹೋರಾಟ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದ್ದಾರೆ.






