ಬಸವಾದಿ ಶರಣರ ಮೇಲೆ ದಾಳಿ ನಿಲ್ಲಿಸದಿದ್ದರೆ ಬೀದಿಗಿಳಿಯುತ್ತೇವೆ: ಮಠಾಧಿಪತಿಗಳ ಎಚ್ಚರಿಕೆ

ಬೆಂಗಳೂರು : ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ, ಬಸವಾದಿ ಶರಣರ ಹಾಗೂ ಬಸವ ಸಂಸ್ಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯನ್ನು ಇಲ್ಲಿಗೇ ನಿಲ್ಲಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಬಸವ ಸಮಿತಿಯಲ್ಲಿ ನಡೆದ ಚಿಂತನ-ಮಂಥನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.
ಬುಧವಾರ ಇಲ್ಲಿನ ಬಸವ ಭವನದಲ್ಲಿ ನಡೆದ ಲಿಂಗಾಯತ ಸಮುದಾಯದ ವಿವಿಧ ಮಠಾಧಿಪತಿಗಳ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮೇಲ್ಕಂಡ ನಿರ್ಣಯ ಕೈಗೊಂಡಿದ್ದು, ಬಸವಣ್ಣನವರ ಮೇಲೆ ದಾಳಿ ಮುಂದುವರೆದರೆ ನಾಡಿನ ಜನತೆ ಎಲ್ಲರೂ ಒಂದಾಗಿ ಬೀದಿಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಯಿತು.
ಸಭೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ, ತೊಂಟದ ಸಿದ್ದರಾಮ ಸ್ವಾಮಿ, ಬೇಲಿಮಠದ ಶಿವರುದ್ರ ಸ್ವಾಮಿ, ಮಾದಾರ ಚನ್ನಯ್ಯ ಸ್ವಾಮಿ, ಭೋವಿಮಠದ ಇಮ್ಮಡಿ ಸಿದ್ದರಾಮ ಸ್ವಾಮಿ ಸೇರಿದಂತೆ ವಿವಿಧ ಮಠಾಧಿಪತಿಗಳು, ರಾಜ್ಯಸಭೆ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ, ಪ್ರೊ.ಎಸ್ ಜಿ ಸಿದ್ದರಾಮಯ್ಯ, ಅರವಿಂದ ಜತ್ತಿ, ನಿರಂಜನ್ ಆರಾಧ್ಯ, ಡಾ. ಬಸವರಾಜ ಸಬರದ, ರವಿಕೃಷ್ಣ ರೆಡ್ಡಿ ಮತ್ತಿತರ ಹಾಜರಿದ್ದರು.




