ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ನಾಳೆ ʼಬೆಂಗಳೂರು ಚಲೋ ʼ: ಕೆ.ವೀರೇಶ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.2: ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯವನ್ನು ಪ್ರತ್ಯೇಕಗೊಳಿಸಿ ಶೇ.1ರಿಂದ 2ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ನಾಳೆ(ಸೆ.3) ನಗರದ ಫ್ರೀಡಂ ಪಾರ್ಕ್ನಲ್ಲಿ ಬೆಂಗಳೂರು ಚಲೋ-ಬೃಹತ್ ಧರಣಿ ನಡೆಸಲಾಗುವುದು ಎಂದು ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಕೆ.ವೀರೇಶ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವತ್ತು ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಹೋರಾಟಕ್ಕೆ ಕರ್ನಾಟಕ ಸರಕಾರ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸಮೀಕ್ಷೆ ನಡೆಸಿತ್ತು. ಅದರಂತೆ ಅತ್ಯಂತ ಹಿಂದುಳಿದ 59 ಅಸ್ಪೃಶ್ಯ ಅಲೆಮಾರಿ ಸಮಮುದಾಯಗಳಿಗೆ ‘ಎ’ ಗುಂಪು ಎಂದು ವಿಂಗಡಿಸಿ ಶೇ.1ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು. ಸರಕಾರ ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸ್ಸನ್ನು ಬದಿಗೊತ್ತಿ ರಾಜಕೀಯ ತೀರ್ಮಾನ ಮಾಡಿ ಅಲೆಮಾರಿ ಸಮುದಾಯಗಳಿಗೆ ವಂಚಿಸಲಾಗಿದೆ ಎಂದು ದೂರಿದರು.
ಚುನಾವಣಾ ರಾಜಕಾರಣದಲ್ಲಿ ಪ್ರಭಾವಿಯಾಗಬಲ್ಲ ಮತ್ತು ಶಕ್ತಿ ರಾಜಕಾರಣವನ್ನು ನಿಯಂತ್ರಿಸಬಲ್ಲ ಬಲಾಢ್ಯ ಸಮುದಾಯಗಳು ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತವೆ. ಇದರಿಂದಾಗಿ ಅಲೆಮಾರಿಗಳಂತಹ ಸಣ್ಣ ಸಣ್ಣ ಸಮುದಾಯಗಳಿಗೆ ಯಾವ ಪ್ರಾತಿನಿಧ್ಯವೂ ಸಿಗುವುದಿಲ್ಲ. ಈ ಕಾರಣದಿಂದಾಗಿ ಸಾಮಾಜಿಕ ನ್ಯಾಯವೂ ಪರಿಪಾಲನೆಯಗುವುದಿಲ್ಲ. ಸರಕಾರದ ಈ ನಿರ್ಣಯವನ್ನು ಮತ್ತೊಮ್ಮೆ ಪರಿಶೀಲಿಸಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಂದಿಜೋಗಿ ಸಮುದಾಯದ ರಾಜ್ಯಾಧ್ಯಕ್ಷ ವೆಂಕಟರಮಣಯ್ಯ, ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯದ ಅಧ್ಯಕ್ಷ ಬಸವರಾಜ ನಾರಾಯಣಕರ, ಬಿ.ಎಚ್.ಮಂಜುನಾಥ್, ಲೋಹಿತಾಕ್ಷ ಮತ್ತಿತರರು ಉಪಸ್ಥಿತರಿದ್ದರು.







