ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ‘ಅ.2ಕ್ಕೆ ದಿಲ್ಲಿ ಚಲೋ’

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.29: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಅ.2ಕ್ಕೆ ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಶೇಷಪ್ಪ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಹಲವು ವರ್ಷಗಳೇ ಕಳೆದಿದ್ದರೂ ಅಲೆಮಾರಿ ಸಮುದಾಯಗಳ ಬದುಕು ಬೀದಿಯಲ್ಲೇ ಕಳೆಯುವಂತಾಗಿದ್ದು, ಇಂತಹ ಪರಿಸ್ಥಿತಿಯಿಂದ ಮೇಲೆತ್ತಲು ರಾಹುಲ್ ಗಾಂಧಿ ಮಧ್ಯೆಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಶೀಘ್ರದಲ್ಲೇ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳ ಮೀಸಲಾತಿ ಜಾರಿಯಾಗಬೇಕು. ಶತಮಾನಗಳ ಅನ್ಯಾಯವನ್ನು ಸರಿಪಡಿಸಲು ಪರಿಣಾಮಕಾರಿ ಪ್ಯಾಕೇಜ್ ಘೋಷಿಸಬೇಕು. ಸುಪ್ರೀಂ ಕೋರ್ಟ್ನ ಮಾರ್ಗಸೂಚಿ, ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳಿಗೆ ವ್ಯತಿರಿಕ್ತವಾಗಿರುವ ಅಲೆಮಾರಿ ಸಮುದಾಯಗಳಿಗೆ ಸಂಬಂಧಿಸಿದಂತೆ ಸರಕಾರ ತೆಗೆದುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಬೇಕು. ಅಲೆಮಾರಿ ಸಮಯದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಆಗ್ರಹಿಸಿದರು.
ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಅಲೆಮಾರಿ ಸಮುದಾಯಗಳಿಗೆ ಸೂಕ್ತ ವಸತಿ ವ್ಯವಸ್ಥೆ, ಉದ್ಯೋಗ ಮತ್ತು ಶಿಕ್ಷಣವನ್ನು ನೀಡಬೇಕು. ದಿಲ್ಲಿ ಚಲೋದಲ್ಲಿ ಒಳಮೀಸಲಾತಿ ಹೋರಾಟಗಾರರಾದ ಅಂಬಣ್ಣ ಅರೋಲಿಕರ್, ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ, ಉಪನ್ಯಾಸಕ ಡಾ.ಹುಲಿಕುಂಟೆ ಮೂರ್ತಿ, ಜಿ.ಎನ್.ದೇವಿ, ಸುರೇಶ್ ನೇಹಾಲ್ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಖಜಾಂಚಿ ಚಿನ್ನ ಮತ್ತಿತರರು ಹಾಜರಿದ್ದರು.







