‘ಕೈ ಮಣ್ಣಿನಲ್ಲಿ-ಹೃದಯದಲ್ಲಿ ಭಾರತ’ | ದೇಶಾದ್ಯಂತ 10 ಲಕ್ಷ ಸಸಿಗಳನ್ನು ನೆಡುವ ಗುರಿ : ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್

ಬೆಂಗಳೂರು : ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಸಿಐಒ) ವತಿಯಿಂದ ಜೂ.25 ರಿಂದ ಜು.25ರವರೆಗೆ ‘ಕೈ ಮಣ್ಣಿನಲ್ಲಿ-ಹೃದಯದಲ್ಲಿ ಭಾರತ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶಾದ್ಯಂತ 10 ಲಕ್ಷ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಒ ಆರ್.ಟಿ.ನಗರ ವಿಭಾಗದ ವಿದ್ಯಾರ್ಥಿನಿ ಮುಸ್ಕಾನ್ ಫಾತಿಮಾ ತಿಳಿಸಿದರು.
ಮಂಗಳವಾರ ನಗರದ ದಾರುಸ್ಸಲಾಮ್ ಕಟ್ಟಡದಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಮಕ್ಕಳಲ್ಲಿ ಗಿಡ ನೆಡುವುದು ಮತ್ತು ಪರಿಸರ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಇದಲ್ಲದೇ, ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಆಸಕ್ತಿಯನ್ನು ಉತ್ತೇಜಿಸಲು, ಚಿತ್ರಕಲೆ, ಪ್ರಬಂಧ, ಕವನ ಮತ್ತು ಸಾಮಾಜಿಕ ಮಾಧ್ಯಮ ರೀಲ್ಸ್ ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುವುದು. ಪೋಷಕರು, ಮಾರ್ಗದರ್ಶಕರು ಮತ್ತು ಮಕ್ಕಳಿಗಾಗಿ ಬೆಂಗಳೂರಿನ ದೊಡ್ಡನಗುಡ್ಡೆಯಲ್ಲಿ ಪರಿಸರ ಸ್ನೇಹಿ ಕೈತೋಟ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಮುಸ್ಕಾನ್ ಫಾತಿಮಾ ಹೇಳಿದರು.
ಸಿಐಒ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಾರೆ. ಹಸಿರು ಸೆಲ್ಫಿ ಅಭಿಯಾನ ನಡೆಸಲಾಗುವುದು. ಅಲ್ಲದೇ, ಕನಿಷ್ಠ 50 ಸ್ಥಳಗಳಲ್ಲಿ ಮಕ್ಕಳು ತಮ್ಮ ಸ್ಥಳೀಯ ಸಮುದಾಯ ಕೇಂದ್ರಗಳು, ಮಸೀದಿಗಳು ಇತ್ಯಾದಿಗಳೊಂದಿಗೆ ಸೇರಿ ಗಿಡ ನೆಡುವ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಶಾಲೆಯ ಮಕ್ಕಳು, ಶಾಲಾ ಶಿಕ್ಷಕರು ಭಾಗವಹಿಸಿದ್ದರು.







