ಮೇಲ್ಮನವಿ ಸಲ್ಲಿಕೆಗೆ 14 ವರ್ಷ ವಿಳಂಬ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಚಾಟಿ

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಬಳಿಕ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ಸರಕಾರದ ನಡೆಯನ್ನು ತೀವ್ರವಾಗಿ ಟೀಕಿಸಿರುವ ಹೈಕೋರ್ಟ್, ರಾಜ್ಯ ಸರಕಾರವನ್ನು 14 ವರ್ಷಗಳ ಕಾಲ ವನವಾಸದಲ್ಲಿದ್ದ ಶ್ರೀರಾಮನಂತೆ ಪರಿಗಣಿಸಲಾಗದು ಎಂದು ಮಾರ್ಮಿಕವಾಗಿ ನುಡಿದಿದೆ.
ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್‌ನ ದಿವಾಳಿ ಪ್ರಕ್ರಿಯೆ ಸಂಬಂಧಿಸಿದಂತೆ ನಿಜಿನೊಯ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಿರ್ಲೋಸ್ಕರ್ ಸಂಸ್ಥೆಯ ಅಧಿಕೃತ ಬರ್ಖಾಸ್ತುದಾರರ (Official Liquidator) ವಿರುದ್ಧ ಕಂದಾಯ ಇಲಾಖೆ ಮುದ್ರಾಂಕ ಮತ್ತು ನೋಂದಣಿ ವಿಭಾಗದ ಪ್ರಧಾನ ಕಾರ್ಯದರ್ಶಿ, ನೋಂದಣಿ ಇಲಾಖೆ ಮಹಾನಿರೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರು ಹಾಗೂ ದಾವಣಗೆರೆ ಜಿಲ್ಲಾ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮೇಲ್ಮನವಿ ಸಲ್ಲಿಸಲು 14 ವರ್ಷ ವಿಳಂಬ ಮಾಡಿದ್ದ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಹೇಳಿದ್ದೇನು?
ರಾಜ್ಯ ಸರಕಾರ 13 ವರ್ಷ, 319 ದಿನಗಳ ಬಳಿಕ ಮೇಲ್ಮನವಿ ಹಾಗೂ ಮೇಲ್ಮನವಿ ಸಲ್ಲಿಕೆಯಲ್ಲಿನ ವಿಳಂಬ ಮನ್ನಿಸಲು ಕೋರಿ ಅರ್ಜಿ ಸಲ್ಲಿಸಿದೆ. 14 ವರ್ಷಗಳ ಬಳಿಕ ಎಚ್ಚೆತ್ತು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯತೆಯನ್ನು ಸರಕಾರ ಮನಗಂಡಿದೆ. 14 ವರ್ಷ ಎಂದರೆ ಅದು ಶ್ರೀರಾಮ ವನವಾಸದಲ್ಲಿದ್ದು, ಬಳಿಕ ಅಯೋಧ್ಯೆಗೆ ಮರಳಿದ ಅವಧಿ. ಆದರೆ, ಈ ಪ್ರಕರಣದಲ್ಲಿ ವಿಳಂಬ ಕ್ಷಮಿಸುವುದಕ್ಕೆ ಸರಕಾರವೇನೂ 14 ವರ್ಷ ವನವಾಸದಲ್ಲಿ ಇರಲಿಲ್ಲ. ಆದ್ದರಿಂದ, ಇಷ್ಟು ಅತಿಯಾದ ವಿಳಂಬವನ್ನು ಮನ್ನಿಸಲು ಯಾವುದೇ ಆಧಾರ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮೇಲ್ಮನವಿ ಸಲ್ಲಿಸಿರುವ ಸರ್ಕಾರ ನೀಡಿರುವ ಕಾರಣಗಳು ಲಿಮಿಟೇಷನ್ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಕೆ ವಿಳಂಬಕ್ಕೆ ಸಮರ್ಪಕ ಕಾರಣ ಮಾನದಂಡವನ್ನು ಪೂರೈಸಿಲ್ಲ. ಸಮಂಜಸ ವಿವರಣೆ ನೀಡಿದರೆ ವಿಳಂಬವನ್ನು ಮನ್ನಿಸಿ, ಮೇಲ್ಮನವಿ ಪರಿಗಣಿಸಬಹುದಿತ್ತು. ಆದರೆ, ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವನ್ನು ಮನ್ನಿಸಲಾಗದು ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, ಸರ್ಕಾರದ ಮೇಲ್ಮನವಿ ಹಾಗೂ ವಿಳಂಬ ಮನ್ನಿಸಲು ಕೋರಿದ್ದ ಅರ್ಜಿ ಎರಡನ್ನೂ ವಜಾಗೊಳಿಸಿದೆ.
ಪ್ರಕರಣವೇನು?
ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್‌ನ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಫೆಬ್ರವರಿ 2011ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸರಕಾರ 2024ರಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಇತ್ತೀಚೆಗಷ್ಟೇ 11 ವರ್ಷ ತಡವಾಗಿ ಮೇಲ್ಮನವಿ ಸಲ್ಲಿಸಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ದಂಡನೆಗೆ ಗುರಿಯಾಗಿದ್ದ ರಾಜ್ಯ ಸರಕಾರ ಇದೀಗ 14 ವರ್ಷದ ನಂತರ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್‌ನಿಂದಲೂ ತಪರಾಕಿ ಹಾಕಿಸಿಕೊಂಡಿದೆ.







