ಬೆಂಗಳೂರಿನಲ್ಲಿ ಪಟಾಕಿ ಅವಘಡ; 14ಕ್ಕೂ ಅಧಿಕ ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ PC : freepik
ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಪಟಾಕಿ ಅವಘಡಗಳಲ್ಲಿ ಮೂರು ವರ್ಷದ ಮಗು ಸೇರಿದಂತೆ 14ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಣ್ಣಿಗೆ ಗಂಭೀರ ಹಾನಿ ಮಾಡಿಕೊಂಡವರು ಇಲ್ಲಿನ ಮಿಂಟೋ ಆಸ್ಪತ್ರೆ, ಶಂಕರ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೆಲವರಿಗೆ ಮೈ, ಕೈಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಸಂಜೆ ಮನೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ಮೂರು ವರ್ಷದ ಮಗುವಿನ ಕಣ್ಣಿಗೆ ಪಟಾಕಿ ಕಿಡಿ ತಾಗಿ ಹಾನಿಯಾಗಿತ್ತು. ಆಸ್ಪತ್ರೆಯಲ್ಲಿ ಕಣ್ಣನ್ನು ಶುಭ್ರಗೊಳಿಸಿ ಔಷಧಿ ಹಾಕಲಾಗಿದ್ದು, ಹೆಚ್ಚಿನ ಅರೈಕೆಯ ಅಗತ್ಯವಿದೆ ಎಂದು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ನರೇನ್ ಶೆಟ್ಟಿ ಹೇಳಿದ್ದಾರೆ. 12 ವರ್ಷದ ಬಾಲಕನೋರ್ವ ಪಟಾಕಿ ಸಿಡಿಸುವಾಗ ಕಿಡಿಯೊಂದು ತಗಲಿ ಗಾಯಗೊಂಡಿದ್ದು, ಇಲ್ಲಿನ ಮಿಂಟೋ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅದೇ ರೀತಿ, 14 ವರ್ಷದ ಬಾಲಕನೋರ್ವನಿಗೆ ರಾಕೆಟ್ ಸಿಡಿಮದ್ದು ತಗಲಿ ಗಾಯಗೊಂಡಿದ್ದು, ಹೊರ ರೋಗಿಗಳ ವಿಭಾಗದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
15 ವರ್ಷದ ಬಾಲಕನೋರ್ವನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಮಡಿವಾಳ ಹಾಗೂ ಬೊಮ್ಮನಹಳ್ಳಿ ಬಳಿ ಮತ್ತಿಬ್ಬರು ಪಟಾಕಿ ಸಿಡಿಸುತ್ತಿರುವುದನ್ನು ನೋಡಿದ್ದ ವೇಳೆ ಬೆಂಕಿಯ ಕಿಡಿ ತಗಲಿ ದೇಹಕ್ಕೆ ಹಾನಿಯಾಗಿದೆ. ಹೀಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಗರದಲ್ಲಿ ಸಿಡಿಸಿದ ಪಟಾಕಿಯಿಂದ ಈವರೆಗೂ 14ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ನಗರದ ನಾನಾ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸೋಮವಾರ ನರಕಚತುರ್ದಶಿದಿನದಂದು ಸಂಜೆ ಪಟಾಕಿ ಹಚ್ಚುವ ವೇಳೆ ಉಂಟಾದ ಅವಘಡದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡು ನಾರಾಯಣ ನೇತ್ರಾಲಯದಲ್ಲಿ ಐವರು ಹಾಗೂ ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಐವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹಬ್ಬಕ್ಕೂ ಮುನ್ನಾ ದಿನವಾದ ರವಿವಾರ ಇಬ್ಬರು ಬಾಲಕರು ಕಣ್ಣಿಗೆ ಗಾಯ ಮಾಡಿಕೊಂಡು ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸೋಮವಾರ ಗಂಭೀರ ಗಾಯಗೊಂದಿದ್ದ ಬಂದಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಓರ್ವ ಬಾಲಕನಿಗೆ ಗಂಭೀರವಾದ ಹಾನಿಯಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.







