ಎಸೆಸೆಲ್ಸಿ ಪರೀಕ್ಷೆ ನೋಂದಣಿಗೆ ನ.15ರ ವರೆಗೆ ಅವಧಿ ವಿಸ್ತರಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು : 2026ನೆ ಮಾರ್ಚ್ನಲ್ಲಿ ನಡೆಯುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಳ್ಳುವ ಅವಧಿಯನ್ನು ನ.15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟನೆ ಹೊರಡಿಸಿದೆ.
ರಾಜ್ಯದ ಸರಕಾರ ಅನುದಾನಿತ, ಖಾಸಗಿ ಶಾಲೆಗಳಿಂದ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು, ಆನ್ಲೈನ್ ಮುಖಾಂತರ ನೇರವಾಗಿ ನೋಂದಾಯಿಸುವ ಖಾಸಗಿ ಅಭ್ಯರ್ಥಿಗಳು ಮತ್ತು ಎಲ್ಲ ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್ಲೈನ್ ಮುಖಾಂತರ ನೋಂದಾಯಿಸಲು ಅವಧಿಯನ್ನು ಅ.31ರವರೆಗೆ ನಿಗಧಿಪಡಿಸಲಾಗಿತ್ತು.
ಮಂಡಳಿ ಜಾಲತಾಣದ ಮೂಲಕ ಖಾಸಗಿ ಅಭ್ಯರ್ಥಿಗಳು, ಶಾಲಾ ಪುನರಾವರ್ತಿತ ಮತ್ತು ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಶುಲ್ಕ ಪಾವತಿಸಲು ನ.15 ಕೊನೆಯ ದಿನಾಂಕವಾಗಿದೆ. ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ ಖಾಸಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಪರಿಶೀಲಿಸಿ, ಶಾಲಾ ಮುಖ್ಯೋಪಾಧ್ಯಾಯರು ಅನುಮೋದಿಸಲು ನ.20 ಕೊನೆಯ ದಿನಾಂಕವಾಗಿದೆ.
ಅ.18ರವರೆಗೆ ಶಾಲೆಗಳು ರಜೆಯಿದ್ದ ಕಾರಣ, ರಾಜ್ಯದ ಕೆಲವು ಶಾಲೆಗಳಿಂದ ಹಾಗೂ ಪೋಷಕರಿಂದ ವಿದ್ಯಾರ್ಥಿಗಳ ನೋಂದಣಿ ಮಾಡಲು ದಿನಾಂಕವನ್ನು ವಿಸ್ತರಣೆ ಮಾಡುವಂತೆ ಮನವಿಗಳು ಬಂದಿವೆ. ಹೀಗಾಗಿ ವಿದ್ಯಾರ್ಥಿಗಳ ನೋಂದಣಿಗಾಗಿ ದಿನಾಂಕಗಳನ್ನು ವಿಸ್ತರಣೆ ಮಾಡಲಾಗಿದೆ.







