‘ಬೆಂಗಳೂರು ಸಮಗ್ರ ಅಭಿವೃದ್ಧಿಗೆ 1.50 ಲಕ್ಷ ರೂ.ಕೋಟಿ ಅನುದಾನ’ : ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳಾದ ಟನಲ್ ರಸ್ತೆ, ಆರ್ಟಿಲರಿ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಪೆಪಿಫೆರಲ್ ವರ್ತುಲ ರಸ್ತೆ, ಘನತ್ಯಾಜ ವಿಲೇವಾರಿ ಸೇರಿದಂತೆ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಂದಾಜು ರೂ. 1.50 ಲಕ್ಷ ಕೋಟಿ ರೂ.ಹಣ ವೆಚ್ಚವಾಗಲಿದ್ದು, ಕೇಂದ್ರ ಸರಕಾರದಿಂದ ಸಮರ್ಪಕ ಅನುದಾನ ಒದಗಿಸಿಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ರವಿವಾರ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ ಮೆಟ್ರೋ ರೈಲು ಹಳದಿ ಮಾರ್ಗ ಉದ್ಘಾಟನೆ ಸಮಾರಂಭದ ವೇದಿಕೆ ಮೇಲೆ ಪ್ರಧಾನಿಗೆ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.
ಕರ್ನಾಟಕವು ವರ್ಷಕ್ಕೆ ಸುಮಾರು 4.50 ಲಕ್ಷ ಕೋಟಿ ರೂ.ತೆರಿಗೆ ಪಾವತಿಸುತ್ತಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ರಾಜ್ಯ ಸರಕಾರವು ಯಶಸ್ವಿಯಾಗಿ ಮೆಟ್ರೋ ಮಾರ್ಗ ಹಾಗೂ ಡಬಲ್ ಡೆಕ್ಕರ್ ಅನ್ನು ಅನುಷ್ಠಾನಗೊಳಿಸಿದೆ ಎಂದು ಅವರು ತಿಳಿಸಿದರು.
ಐದನೆ ಹಂತದ ಕಾವೇರಿ ಕುಡಿಯುವ ನೀರು ಯೋಜನೆಯೂ ಯಶಸ್ವಿಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕುಡಿಯುವ ನೀರಿನ ಯೋಜನೆಗಳು, ರಾಜಕಾಲುವೆಗಳ ಪಕ್ಕದಲ್ಲಿ ನೂತನ ರಸ್ತೆಗಳ ನಿರ್ಮಾಣ, ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಈ ಎಲ್ಲ ಯೋಜನೆಗಳಿಂದ ಬೆಂಗಳೂರು ಇನ್ನಷ್ಟು ಪ್ರಮುಖ ನಗರವಾಗಿ ಅಭಿವೃದ್ಧಿಯಾಗಲಿದೆ ಎಂದು ಶಿವಕುಮಾರ್ ಮನವಿಯಲ್ಲಿ ವಿವರಿಸಿದ್ದಾರೆ.
ಪ್ರಮುಖ ಯೋಜನೆಗಳು ಹಾಗೂ ಅಂದಾಜು ಮೊತ್ತ: ಟನಲ್ ರಸ್ತೆ, ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 41,780 ಕೋಟಿ ರೂ., ನಗರದ ಪ್ರಮುಖ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣಕ್ಕೆ 15 ಸಾವಿರ ಕೋಟಿ ರೂ., ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ., ಘನತ್ಯಾಜ್ಯ ವಿಲೇವಾರಿಗೆ 3,200 ಕೋಟಿ ರೂ., ಡಬಲ್ ಡೆಕ್ಕರ್ ಗಳ ನಿರ್ಮಾಣಕ್ಕೆ 8,916 ಕೋಟಿ ರೂ.ವೆಚ್ಚವಾಗಲಿದೆ.
ಮೆಟ್ರೋ 1 ನೆ ಹಂತ ಸಂಪೂರ್ಣಗೊಂಡು, ಕಾರ್ಯ ನಿರ್ವಹಿಸುತ್ತಿದೆ. ಹಂತ 2, 2ಎ, 3, 3ಎ ಮೆಟ್ರೋ ರೈಲು ಯೋಜನೆಗಳ ಅನುಷ್ಠಾನದಿಂದ ರೈಲು ಮಾರ್ಗದ ಒಟ್ಟು ಉದ್ದ 128 ಕಿ.ಮೀಗೆ ವಿಸ್ತಾರವಾಗಲಿದೆ. ಇದರಿಂದ ಸಂಚಾರ ದಟ್ಟಣೆ ತಪ್ಪಿಸಬಹುದು. ಈ ಯೋಜನೆಗಳಿಗೂ ಸೂಕ್ತ ಅನುದಾನ ನೀಡಿ ಎಂದು ಮನವಿಯಲ್ಲಿ ಕೋರಲಾಗಿದೆ.
ರಾಜಕಾಲುವೆಗಳ ಪಕ್ಕ ಹೊಸ ರಸ್ತೆಗಳ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ನಗರಕ್ಕೆ ಹೆಚ್ಚುವರಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ 6,939 ಕೋಟಿ ರೂ.ಅನುದಾನ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
ನಮೋ ಭಾರತ್ ರೈಲು ನೀಡಿ: ಇದಲ್ಲದೆ ರ್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ ಅನ್ನು ಬೆಂಗಳೂರಿನಲ್ಲಿ ಜಾರಿಗೆ ತರಬೇಕು. ಬೆಂಗಳೂರು-ಬಿಡದಿ-ಮೈಸೂರು, ಬೆಂಗಳೂರು- ಹಾರೋಹಳ್ಳಿ-ಕನಕಪುರ, ಬೆಂಗಳೂರು-ನೆಲಮಂಗಲ-ತುಮಕೂರು, ಬೆಂಗಳೂರು-ವಿಮಾನ ನಿಲ್ದಾಣ- ಚಿಕ್ಕಬಳ್ಳಾಪುರ, ಬೆಂಗಳೂರು-ಹೊಸಕೋಟೆ-ಕೋಲಾರಕ್ಕೆ ಆರ್‌ಆರ್‌ಟಿಎಸ್ ಯೋಜನೆಯಡಿ ‘ನಮೋ ಭಾರತ್ ರೈಲು ಯೋಜನೆ’ ಅನುಷ್ಠಾನಗೊಳಿಸಬೇಕೆಂದು ಶಿವಕುಮಾರ್ ಮನವಿ ಸಲ್ಲಿಸಿದರು.
ಬೆಂಗಳೂರು ನಗರದ ಒಳಗೆ 77.6 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ನಗರ ಬೆಳೆದ ಪರಿಣಾಮವಾಗಿ ಈ ಹೆದ್ದಾರಿಗಳ ಮೂಲಕ ಸುಲಭ ಸಂಚಾರ ದುಸ್ತರವಾಗಿದೆ. ಆರ್ಥಿಕ ಬೆಳವಣಿಗೆಗೂ ಹೊಡೆತ ಬೀಳುತ್ತಿದೆ. ಆದುದರಿಂದ, ಹೊಸೂರು ರಸ್ತೆ-ಬಳ್ಳಾರಿ ರಸ್ತೆ, ಕೆ.ಆರ್.ಪುರಂ-ಮೈಸೂರು ರಸ್ತೆವರೆಗೆ ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪಿಪಿಪಿ ಮಾದರಿಯಡಿ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣ ಮಾಡಿದರೆ ನಗರದ ಒಳಗೆ ಸಂಚಾರ ದಟ್ಟಣೆ ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ದಿನವೊಂದಕ್ಕೆ 6,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಇದರ ವೈಜ್ಞಾನಿಕ ವಿಲೇವಾರಿಗೆ ಸಿಎನ್ ಜಿ ತಯಾರಿಕೆ ಘಟಕ, ಗೊಬ್ಬರ ಘಟಕ, ವೇಸ್ಟ್ ಎನರ್ಜಿ ಘಟಕಗಳ ಸ್ಥಾಪನೆಗೆ ಬೆಂಬಲ ಕೋರಿ ಪತ್ರದಲ್ಲಿ ವಿವರಿಸಲಾಗಿದೆ.
ಜೊತೆಗೆ ಮೆಟ್ರೋ ಮಾರ್ಗದ ಜೊತೆಗೆ ಡಬಲ್ ಡೆಕ್ಕರ್ ಯೋಜನೆ ಕೈಗೆತ್ತಿಕೊಂಡರೆ ಪರ್ಯಾಯ ರಸ್ತೆ ಮಾರ್ಗಗಳ ಸಮಸ್ಯೆ, ಭೂಸ್ವಾಧೀನ ಸಮಸ್ಯೆ, ಹೆಚ್ಚುವರಿ ಪರಿಹಾರ ಸಮಸ್ಯೆ ನಿವಾರಣೆಯಾಗಲಿದೆ. ಜೆ.ಪಿ.ನಗರದಿಂದ ಹೆಬ್ಬಾಳದ ವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಯ ಮಾರ್ಗಗಳಲ್ಲಿ ಸುಮಾರು 40.65 ಕಿಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ರಾಜಕಾಲುವೆಗಳ ಒತ್ತುವರಿ ತಡೆಯಲು ಅವುಗಳ ಪಕ್ಕದಲ್ಲಿಯೆ ರಸ್ತೆ ನಿರ್ಮಾಣ ಮಾಡುವ ಆಲೋಚನೆ ಬಗ್ಗೆ ಹಾಗೂ ಹೆಚ್ಚುತ್ತಿರುವ ನಗರದ ಜನಸಂಖ್ಯೆಗೆ ಅನುಗುಣವಾಗಿ ಆರನೆ ಹಂತದ ಕುಡಿಯುವ ನೀರಿನ ಯೋಜನೆ ಮೂಲಕ ದಿನಕ್ಕೆ 500 ಎಂಎಲ್ ಡಿ ನೀರನ್ನು ಪೂರೈಕೆ ಮಾಡುವ ಬಗ್ಗೆ ಮನವಿ ಪತ್ರದಲ್ಲಿ ಶಿವಕುಮಾರ್ ಉಲ್ಲೇಖಿಸಿದ್ದಾರೆ.







