ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಇ.ವಿ. ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಪ್ರಸ್ತಾವ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.19: ರಾಜ್ಯ ಸರಕಾರವು ಭಾರಿ ವಾಹನಗಳ ಚಾರ್ಜಿಂಗ್ ಉದ್ದೇಶಕ್ಕಾಗಿಯೇ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಇ.ವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ.
ಇವು 60 ಕಿಲೋ ವ್ಯಾಟ್ನಿಂದ 120 ಕಿಲೋ ವ್ಯಾಟ್ ಸಾಮರ್ಥ್ಯ ಹೊಂದಿದ್ದು, ಬಸ್ ಮತ್ತು ಟ್ರಕ್ಗಳಂತಹ ವಾಹನಗಳು ತ್ವರಿತವಾಗಿ ಚಾರ್ಜ್ ಆಗಲಿವೆ. ವಿದ್ಯುತ್ ಚಾಲಿತ(ಇ.ವಿ) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ರಾಜ್ಯವು, ಬಸ್ ಹಾಗೂ ಟ್ರಕ್ಗಳಂತಹ ಭಾರಿ ವಾಹನಗಳನ್ನು ವಿದ್ಯುದೀಕರಣ ಮಾಡಲು ಮುಂದಾಗಿದೆ. ಹೀಗಾಗಿ ಕೇಂದ್ರದ ಪಿಎಂ ಇ-ಡ್ರೈವ್ ಯೋಜನೆಯಡಿ ಪ್ರಸ್ತಾವ ಸಲ್ಲಿಸಲಿದೆ.
ಇ.ವಿ. ಚಾರ್ಜಿಂಗ್ ಕೇಂದ್ರಗಳಲ್ಲಿ ವಾಹನಗಳು ತ್ವರಿತವಾಗಿ ಚಾರ್ಜ್ ಆಗಲಿವೆ. ಲಘು ವಾಹನಗಳನ್ನು ಮೀರಿ ವಿದ್ಯುತ್ ಚಾಲಿತ ಬಸ್ ಹಾಗೂ ಟ್ರಕ್ಗಳನ್ನು ಈ ಕೇಂದ್ರಗಳಲ್ಲಿ ಚಾರ್ಜ್ ಮಾಡಬಹುದು. ದೂರದ ಪ್ರಯಾಣದ ಹಾಗೂ ಸರಕು ಸಾಗಣೆ ವಾಹನಗಳ ಕಾರ್ಯಾಚರಣೆಗೆ ಈ ಚಾರ್ಜಿಂಗ್ ಕೇಂದ್ರಗಳು ಬಲ ತುಂಬಲಿವೆ.
ರಾಜ್ಯದಲ್ಲಿ ಸದ್ಯ 6 ಸಾವಿರಕ್ಕೂ ಹೆಚ್ಚು ಇ.ವಿ. ಚಾರ್ಜಿಂಗ್ ಕೇಂದ್ರಗಳಿದ್ದು, ಕರ್ನಾಟಕವು ಪ್ರಸ್ತುತ ಇ.ವಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಹೊಸ ಯೋಜನೆಯ ಭಾಗವಾಗಿ, ಇಂಧನ ಇಲಾಖೆಯು ಹೆಚ್ಚಿನ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಲು ಬಸ್ ಡಿಪೋಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, ಸರಕು ಸಾಗಣೆ ಕಾರಿಡಾರ್ ಹಾಗೂ ಲಾಜಿಸ್ಟಿಕ್ ಹಬ್ಗಳಂತಹ ಸ್ಥಳಗಳನ್ನು ಗುರುತಿಸುತ್ತಿದೆ.
ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದು, ಚಾರ್ಜಿಂಗ್ ಜಾಲ ಬಲಪಡಿಸುವುದು ಮತ್ತು ಸ್ಥಳೀಯವಾಗಿ ವಿದ್ಯುತ್ ಚಾಲಿತ ವಾಹನಗಳ ಬಿಡಿ ಭಾಗಗಳ ಉತ್ಪಾದನೆ ಉತ್ತೇಜಿಸುವುದು ಪಿಎಂ ಇ-ಡ್ರೈವ್ ಯೋಜನೆಯ ಗುರಿಯಾಗಿದೆ.
ರಾಜ್ಯದಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬೆಸ್ಕಾಂ ಅನ್ನು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಯೋಜನೆಯಡಿ ಟ್ರಾನ್ಸ್ ಫಾರ್ಮರ್ ಮತ್ತು ಕಂಡಕ್ಟರ್ ಘಟಕಗಳಿಗೆ ಶೇ.100ರಷ್ಟು ಹಾಗೂ ಇತರೆ ಸಲಕರಣೆಗಳಿಗೆ ಶೇ.70ರವರೆಗೆ ಕೇಂದ್ರದಿಂದ ರಾಜ್ಯಕ್ಕೆ ಸಹಾಯಧನ ಸಿಗಲಿದೆ.
ಡಾ.ಎನ್.ಶಿವಶಂಕರ್, ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ







