ಬಿಐಎಎಲ್ ನಲ್ಲಿ ಕೆಎಸ್‍ಐಐಡಿಸಿಗೆ 16.49ಕೋಟಿ ರೂ.ಲಾಭಾಂಶ; ಡಿವಿಡೆಂಡ್ ಪಾಲನ್ನು ಸಿಎಂಗೆ ಹಸ್ತಾಂತರಿಸಿದ ಬಿಐಎಎಲ್

ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು(ಬಿಐಎಎಲ್) ತನ್ನಲ್ಲಿ ಶೇ.13ರಷ್ಟು ಬಂಡವಾಳ ಪಾಲು ಹೊಂದಿರುವ ರಾಜ್ಯ ಸರಕಾರಿ ಸ್ಯಾಮ್ಯದ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್‍ಐಐಡಿಸಿ) 2025-26ನೆ ಸಾಲಿಗೆ ಅನ್ವಯವಾಗುವಂತೆ 16.49 ಕೋಟಿ ರೂ.ಗಳ ಲಾಭಾಂಶವನ್ನು(ಡಿವಿಡೆಂಡ್) ಸೋಮವಾರ ಸಿಎಂಗೆ ಹಸ್ತಾಂತರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಐಎಎಲ್ ಅಧ್ಯಕ್ಷ ಹರಿ ಮರಾರ್ ಅವರಿಂದ ಚೆಕ್ ಅನ್ನು ಸ್ವೀಕರಿಸಿದರು. ಈ ವೇಳೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೆಎಸ್‍ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯೆಲ್ ಉಪಸ್ಥಿತರಿದ್ದರು.
ಈ ಸಂಬಂಧ ಮಾಹಿತಿ ನೀಡಿದ ಸಚಿವ ಎಂ.ಬಿ.ಪಾಟೀಲ್, ಬಿಐಎಎಲ್ 2025-26ನೆ ಸಾಲಿಗೆ ಅನ್ವಯವಾಗುವಂತೆ ಪ್ರತಿ ಷೇರಿಗೆ 3 ರೂ.ಲಾಭಾಂಶ ಘೋಷಿಸಿದೆ. ಇದರಂತೆ ಕೆಎಸ್‍ಐಐಡಿಸಿಗೆ 16.49 ಕೋಟಿ ರೂ.ಒಟ್ಟು ಲಾಭಾಂಶ ಕೊಡಲಾಗಿದೆ. ಇದರಲ್ಲಿ ತೆರಿಗೆ ಕಡಿತದ ನಂತರ ಆ ಸಂಸ್ಥೆಗೆ 14.84 ಕೋಟಿ ರೂ.ಡಿವಿಡೆಂಡ್ ಸಿಕ್ಕಿದೆ ಎಂದು ಹೇಳಿದ್ದಾರೆ.
ಈ ಲಾಭಾಂಶ ಘೋಷಣೆಯು ಬಿಐಎಎಲ್ ಸಂಸ್ಥೆಯ ಅತ್ಯುತ್ತಮ ಆರ್ಥಿಕ ನಿರ್ವಹಣೆಯ ಸಂಕೇತವಾಗಿದೆ. ಸಂಸ್ಥೆಯಲ್ಲಿ ಕೆಎಸ್‍ಐಐಡಿಸಿ ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿದೆ. ಬಿಐಎಎಲ್ ಸಂಸ್ಥೆಯು 2017-18ರ ಬಳಿಕ ಇದೇ ಮೊದಲ ಬಾರಿಗೆ ಡಿವಿಡೆಂಡ್ ಘೋಷಿಸಿದೆ. ಏತನ್ಮಧ್ಯೆ ನಾವು ಬಂದ ಲಾಭವನ್ನು ಮೂಲಸೌಕರ್ಯ ಮತ್ತು ಸಾಮಥ್ರ್ಯ ವಿಸ್ತರಣೆಯಂತಹ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳನ್ನು ದೃಢಗೊಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮಿಕ್ಕಂತೆ ಬಿಐಎಎಲ್‍ನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಶೇ.13ರಷ್ಟು, ಎಫ್‍ಐಎಚ್ ಮಾರಿಷಸ್ ಇನ್ವೆಸ್ಟ್‍ಮೆಂಟ್ಸ್ ಲಿಮಿಟೆಡ್ ಶೇ.30.36 ಮತ್ತು ಆಂಕರೇಜ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟಮೆಂಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಶೇ.43.64ರಷ್ಟು ಬಂಡವಾಳ ಪಾಲು ಹೊಂದಿದೆ ಎಂದು ಎಂ.ಬಿ.ಪಾಟೀಲ್ ನುಡಿದಿದ್ದಾರೆ.






