ಪರಿಶಿಷ್ಟರಿಗೆ ಮೀಸಲಿಟ್ಟ ಹಣ ದುರ್ಬಳಕೆ ಖಂಡಿಸಿ ಆ.18ಕ್ಕೆ ‘ವಿಧಾನಸೌಧ ಚಲೋ’

ಬೆಂಗಳೂರು : ಪರಿಶಿಷ್ಟರ ಏಳಿಗೆಗಾಗಿ ಮೀಸಲಿರುವ ಎಸ್ಸಿಪಿ-ಟಿಎಸ್ಪಿ ಹಣವನ್ನು ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆ.18 ರಂದು ‘ವಿಧಾನಸೌಧ ಚಲೋ’ ಮೂಲಕ, ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ನಗರದ ಶಾಸಕರ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ‘ದಲಿತರ ಹಣ ದುರ್ಬಳಕೆ: ಮೊಂಡುವಾದ ಮಂಡಿಸುತ್ತಿರುವ ರಾಜ್ಯ ಸರಕಾರ’ ಕುರಿತು ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ಮುಖಂಡ ಆರ್.ಮೋಹನ್ ರಾಜ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ರಾಹುಲ್ ಗಾಂಧಿ ಆ.5ರಂದು ರಾಜ್ಯಕ್ಕೆ ಬರುತ್ತಿದ್ದು, ದಲಿತ ಸಂಘಟನೆಗಳ ಒಕ್ಕೂಟದ ನಿಯೋಗವು ಆ.6ರಂದು ಅವರನ್ನು ಭೇಟಿ ಮಾಡಿ ರಾಜ್ಯ ಸರಕಾರ ಎಸ್ಸಿಪಿ-ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದರ ಕುರಿತು ದೂರು ಸಲ್ಲಿಸಿ, ಮೀಸಲು ಹಣದ ಪ್ರಾಮುಖ್ಯತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
2025-26ನೆ ಸಾಲಿನ ಬಜೆಟ್ಟಿನಲ್ಲಿ ಸಿದ್ಧರಾಮಯ್ಯ ದಲಿತರ ಮೀಸಲು ನಿಧಿಗೆ ಕನ್ನ ಹಾಕುವ ಚಾಳಿಯನ್ನು ನಿರ್ಲಜ್ಜೆಯಿಂದ ಮತ್ತೆ ಮುಂದುವರಿಸಿದ್ದಾರೆ. ಎಸ್ಸಿಪಿ-ಟಿಎಸ್ಪಿ ಹಣವನ್ನು ರಾಜ್ಯ ಸರಕಾರ ಎಲ್ಲ ಹಂತಗಳಲ್ಲೂ ದುರ್ಬಳಕೆ ಮಾಡಿಕೊಂಡೇ ಬಂದಿದೆ. ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ 13,433.84 ಸಾವಿರ ಕೋಟಿ ರೂ.ಗಳನ್ನು ವರ್ಗಾವಣೆ ಮಾಡುವುದಾಗಿ ಹೇಳಿದೆ. ಸರಕಾರದ ಈ ದಲಿತ ವಿರೋಧಿ ನೀತಿಯನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಮೋಹನ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಎಸ್‍ಎಸ್‍ಡಿ ರಾಷ್ಟ್ರಾಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ ಎಲ್ಲ ಸಮುದಾಯಗಳಿಗೂ ಸೇರಿದ್ದಾಗಿದೆ. ಹೀಗಿದ್ದರೂ ಕೇವಲ ದಲಿತರ ಹಣ ಮಾತ್ರ ಯಾಕೆ ಬಳಸುತ್ತಿದ್ದೀರಾ? ದಲಿತ ಶಾಸಕರು ಯಾರು ಪ್ರಶ್ನೆ ಮಾಡದೇ ಇರುವುದರಿಂದ ಮತ್ತು ಎಸ್ಸಿಪಿ-ಟಿಎಸ್ಪಿ ಹಣದ ಬಗ್ಗೆ ಆಸಕ್ತಿ ಇಲ್ಲದಿರುವುದರಿಂದಲೇ ಸರಕಾರ ಮೀಸಲು ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿರುವ ಡಿಸಿ ಗಳ ಪೈಕಿ ಇಬ್ಬರು ಮಾತ್ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. 14 ಜನ ಕುರುಬ ಜಾತಿಗೆ ಸೇರಿದ ಸಿಇಓ ಗಳು ಇದ್ದಾರೆ. ಹೀಗಿರುವಾಗ ರಾಜ್ಯ ಸರಕಾರ ದಲಿತರ ಪರವಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅನಿವಾರ್ಯವಾಗಿ ದಲಿತರೆಲ್ಲರೂ ಒಂದಾಗಿ, ಪರ್ಯಾಯ ಪಕ್ಷ ಕಟ್ಟುವುದಕ್ಕೆ ಸಿದ್ದರಾಗಬೇಕಿದೆ. ಮೀಸಲು ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ವಿರೋಧಿಸಿ ಹೈಕೋರ್ಟ್‍ನಲ್ಲಿ ಪಿಎಎಲ್ ಹಾಕಲಾಗುವುದು ಎಂದು ವೆಂಕಟಸ್ವಾಮಿ ತಿಳಿಸಿದರು.
ಸಭೆಯಲ್ಲಿ ಸಮತಾ ಸೈನಿಕ ದಳದ ಜಿ.ಸಿ.ವೆಂಕಟರಮಣಪ್ಪ, ಬಹುಜನ ದಲಿತ ಸಂಘರ್ಷ ಸಮಿತಿಯ ಆರ್.ಎಂ.ಎನ್ ರಮೇಶ್, ವಕೀಲ ಹರಿರಾಮ್, ದಲಿತ ಸಂರಕ್ಷಾ ಸಮಿತಿ ಲಯನ್ ಬಾಲಕೃಷ್ಣ, ದಸಂಸ ಮುಖಂಡರಾದ ಬಿ.ಎನ್.ಗಂಗಾಧರಪ್ಪ, ಎಂ.ಎಸ್.ಜಗನ್ನಾಥ್, ಮುನಿರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.







