ಮೇ 2ರ ಸಚಿವ ಸಂಪುಟ ಸಭೆ ಮುಂದೂಡಿಕೆ

ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶ ಅಧ್ಯಯನ ವರದಿಯ ಕುರಿತು ಚರ್ಚೆ ನಡೆಸಲು ಮೇ 2ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಮೇ 9ಕ್ಕೆ ಮುಂದೂಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎಪ್ರಿಲ್ 17ರಂದು ನಡೆಸಿದ್ದ ಸಂಪುಟ ಸಭೆಯಲ್ಲಿ ಈ ಸಮೀಕ್ಷೆಯ ದತ್ತಾಂಶಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿತ್ತು. ಅಲ್ಲದೇ, ಹೆಚ್ಚಿನ ಚರ್ಚೆಗಾಗಿ ತಾಂತ್ರಿಕ ಮಾಹಿತಿಯೂ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿರುವುದರಿಂದ ಅದನ್ನು ಒದಗಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು.
ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣಗೊಂಡಿರುವುದರಿಂದ ಮೇ 2ರಂದು ಸಚಿವ ಸಂಪುಟ ಸಭೆ ಕರೆದು ಚರ್ಚೆ ನಡೆಸಿ, ಸಮೀಕ್ಷೆಯ ವರದಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದರು.
ಇದೀಗ ಕಾರಣಾಂತರಗಳಿಂದ ಮೇ 2ರಂದು ನಡೆಸಬೇಕಿದ್ದ ಸಚಿವ ಸಂಪುಟ ಸಭೆಯನ್ನು ಮೇ 9ರ ಮಧ್ಯಾಹ್ನ 3 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.





