ಒಂದೇ ವಿಷಯದ ಬಗ್ಗೆ 2 ವಿಚಾರಣೆಗೆ ಅವಕಾಶವಿಲ್ಲ: ಕಸಾಪ

ಬೆಂಗಳೂರು : ಒಂದೇ ವಿಷಯದ ಕುರಿತು ಎರಡು ವಿಚಾರಣೆಗೆ ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ತಿಳಿಸಿದೆ.
ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಕಸಾಪ, ಸಾಹಿತ್ಯ ಪರಿಷತ್ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಸತ್ಯಾಸತ್ಯತೆಯನ್ನು ತಿಳಿದು ಕೊಳ್ಳಲು ಈಗಾಗಲೇ ಸಹಕಾರಿ ಇಲಾಖೆಯು ವಿಚಾರಣೆಯನ್ನು ಆರಂಭಿಸಿದೆ. ಜು.30ರ ಕಾರ್ಯಕಾರಿ ಸಮಿತಿಯಲ್ಲಿ ತೆಗೆದು ಕೊಂಡ ನಿರ್ಧಾರದಂತೆ, ಈ ವಿಷಯವನ್ನು ಪ್ರಕಟನಾ ಸಮಿತಿ ಮತ್ತು ಹಣಕಾಸು ಸಮಿತಿಗಳಲ್ಲಿಯೂ ಚರ್ಚಿಸಿ ಜು.31ರಂದು ನಡೆಯುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೆ.15ರೊಳಗೆ ದಾಖಲೆ ಸಹಿತವಾಗಿ ಉತ್ತರ ನೀಡುತ್ತೇವೆ ಎಂದು ವಿಚಾರಣಾಧಿಕಾರಿಗಳಿಗೆ ಈಗಾಗಲೇ ಕಸಾಪ ತಿಳಿಸಿದ್ದರು.
ಇದೇ ದೂರುಗಳ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ಕನ್ನಡ ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಅವರು ಆದೇಶಿಸಿರುವುದು ಭಾರತದ ಸಂವಿಧಾನವನ್ನು ಸ್ಪಷ್ಟವಾಗಿ ನಿರಾಕರಿಸಿದಂತೆ ಎಂದು ಕಸಾಪ ತಿಳಿಸಿದೆ.
ಒಂದಕ್ಕಿಂತಲೂ ಹೆಚ್ಚು ವಿಚಾರಣೆಯನ್ನು ಒಂದೇ ವಿಷಯದ ಕುರಿತು ನಡೆಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಕೂಡ ಆಗುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಈ ಆದೇಶ ಅಸಿಂಧುವಾಗುತ್ತದೆ. ಈಗಾಗಲೇ ಸಹಕಾರಿ ಇಲಾಖೆಯ ವಿಚಾರಣೆಯ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮಧ್ಯಂತರ ಆದೇಶ ಕೂಡ ಪ್ರಕಟವಾಗಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ವಿಚಾರಣೆಯ ಕುರಿತು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಕಸಾಪ ಹೇಳಿದೆ.
ವಿಚಾರಣೆಯ ಆದೇಶ ಕನ್ನಡ ಸಾಹಿತ್ಯ ಪರಿಷತ್‍ನ ಕುರಿತು ಎರಡು ಸಮಾನಂತರ ವಿಚಾರಣೆಗೆ ಕಾರಣವಾಗುವ ಉದ್ದೇಶದಿಂದ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಕನ್ನಡ ಸಾಹಿತ್ಯ ಪರಿಷತ್ ಘನತೆ ಗೌರವಗಳಿಗೆ ಚ್ಯುತಿ ತರುವ ಇಂತಹ ಪ್ರಯತ್ನಗಳು ಖಂಡನೀಯ ಎಂದು ತಿಳಿಸಿದೆ.







