ವೈದ್ಯಕೀಯ ಪರಿಹಾರ ನಿಧಿಯಡಿ 2 ವರ್ಷದಲ್ಲಿ 57 ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ : ಸಿದ್ದರಾಮಯ್ಯ

ಬೆಂಗಳೂರು : 2023-24 ಮತ್ತು 2024-25ನೇ ಸಾಲುಗಳಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯವರ ವೈದ್ಯಕೀಯ ಪರಿಹಾರ ನಿಧಿ ಸೊಸೈಟಿಯ ಅನುದಾನದಿಂದ 57,738 ಬಡ ರೋಗಿಗಳು ಇದರ ಪ್ರಯೋಜನ ಪಡೆದಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, 2023-24ನೇ ಸಾಲಿನಲ್ಲಿ 30,296 ಫಲಾನುಭವಿಗಳಿಗೆ, 2024-25ನೇ ಸಾಲಿನಲ್ಲಿ 27,442 ಫಲಾನುಭವಿಗಳಿಗೆ ವೆಚ್ಚ ಭರಿಸಲಾಗಿದೆ. ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಕಾರ್ಪಸ್ ನಿಶ್ಚಿತ ಮೊತ್ತದ ಬಡ್ಡಿಯಿಂದ ಬಂದಿರುವ 9.30 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗಿರುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿಯವರ ವೈದ್ಯಕೀಯ ಪರಿಹಾರ ನಿಧಿ ಸೊಸೈಟಿಯ ಕಾರ್ಪಸ್ ಹಣ 110 ಕೋಟಿಗಳನ್ನು ನಿಶ್ಚಿತ ಠೇವಣಿಯಲ್ಲಿಡುವ ಮುಖಾಂತರ ಬರುವ ಬಡ್ಡಿ ಹಣದಲ್ಲಿ ರಾಜ್ಯದಲ್ಲಿ ಗಂಭೀರ ಹಾಗೂ ಅತೀ ವಿರಳ ರೋಗಗಳಿಂದ ನಿರಂತರವಾಗಿ ಬಳಲುತ್ತಿರುವ ಬಡ ರೋಗಿಗಳ ಚಿಕಿತ್ಸೆಯನ್ನು ಸರಕಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒದಗಿಸಿ, ಅದರ ವೆಚ್ಚವನ್ನು ಭರಿಸಿ, ರೋಗಿಗಳಿಗೆ ಸರಕಾರದ ವತಿಯಿಂದ ನೆರವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಜಯದೇವ ಹೃದ್ರೋಗ ಸಂಸ್ಥೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಎಸ್.ಡಿ.ಎಸ್.ಟಿ.ಬಿ. ಆಸ್ಪತ್ರೆ, ನೆಫ್ರೋ ಯೂರಾಲಜಿ ಸಂಸ್ಥೆ, ಪಿ.ಎಂ.ಎಸ್.ಎಸ್.ವೈ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಮಿಂಟೋ ಪ್ರಾದೇಶಿಕ ಕಣ್ಣಿನ ಆಸ್ಪತ್ರೆ, ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್‍ಸ್ ಅಂಡ್ ಆರ್ಗನ್ ಟ್ರಾನ್ಸ್‍ಪ್ಲಾಂಟ್ ಸಂಸ್ಥೆಗಳು ಅನುದಾನವನ್ನು ಬಳಕೆ ಮಾಡಿಕೊಂಡಿವೆ ಎಂದು ಅವರು ತಿಳಿಸಿದರು.
ಅದಲ್ಲದೆ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಾಣಿ ವಿಲಾಸ ಆಸ್ಪತ್ರೆ ಬೆಂಗಳೂರು ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳು ಸೂಪರ್ ಸ್ಪೆಷಾಲಿಟಿ ಅಡಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯವರ ವೈದ್ಯಕೀಯ ಪರಿಹಾರ ನಿಧಿ ಸೊಸೈಟಿಯ ಅನುದಾನಕ್ಕೆ ಬೇಡಿಕೆ ಸಲ್ಲಿಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ಬಡತನ ರೇಖೆಗಿಂತ(ಬಿಪಿಎಲ್) ಕೆಳಗಿರುವ ಫಲಾನುಭವಿಗಳನ್ನು ರಾಜ್ಯದಲ್ಲಿ ಅಳವಡಿಸಿಕೊಂಡಿರುವ ಮಾನದಂಡಗಳನ್ನು ಹೊರರಾಜ್ಯಗಳ ಬಡ ರೋಗಿಗಳಿಗೂ ಅನ್ವಯಿಸಲಾಗುತ್ತಿದೆ. ಈ ಪ್ರಕರಣಗಳಲ್ಲಿ ಆಧಾರ್ ಮಾಹಿತಿಯನ್ನು ಪರಿಗಣಿಸಿ, ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







