ಮಹಿಳಾ ಕಾರ್ಮಿಕರಿಗೆ ವೇತನದಲ್ಲಿ ತಾರತಮ್ಯ ಆರೋಪ | ಮೇ 20ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿ, ಅಪಾಯಕಾರಿ ಉದ್ದಿಮೆಗಳಲ್ಲಿ ಕಡ್ಡಾಯಗೊಳಿಸುವುದು ಮತ್ತು ಕನಿಷ್ಠ ವೇತನ ತಾರತಮ್ಯ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಮೇ 20ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ಈ ಸಂಬಂಧ ಸಮಿತಿ ವತಿಯಿಂದ ನಡೆದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆ ನಾಯಕಿ ಎಸ್.ವರಲಕ್ಷ್ಮೀ, ಮಹಿಳೆ ಹಾಗೂ ಪುರುಷರಿಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳಾ ಕಾರ್ಮಿಕರ ಕೆಲಸದ ಪರಿಸ್ಥಿತಿ, ಹೆರಿಗೆ ಸೌಲಭ್ಯ ಮತ್ತು ಬದುಕುವ ವೇತನದ ಭರವಸೆಯನ್ನೂ ಒದಗಿಸಿದೆ. ಇಷ್ಟಾದರೂ ಈ ಭರವಸೆಯನ್ನು ಇನ್ನೂ ಪೂರೈಸಲಾಗಿಲ್ಲ ಮತ್ತು ಮಹಿಳಾ ಕಾರ್ಮಿಕರು ವೇತನ, ಉದ್ಯೋಗ ಭದ್ರತೆ ಮತ್ತು ಕೆಲಸದ ಪರಿಸ್ಥಿತಿಗಳಲ್ಲಿ ಗಣನೀಯವಾದ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ವಕೀಲೆ ಮೈತ್ರೇಯಿ ಕೃಷ್ಣನ್, ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಮನಶಾಸ್ತ್ರಜ್ಞೆ ಆರ್.ಅರ್ಚನಾ, ವಿವಿಧ ವಿಭಾಗದ ಮಹಿಳಾ ಕಾರ್ಮಿಕರು ಉಪಸ್ಥಿತರಿದ್ದರು.





