ಮೂರು ದಿನಗಳ ‘ಮತ್ಸ್ಯಮೇಳ-2025ಕ್ಕೆ ಚಾಲನೆ

ಬೆಂಗಳೂರು : ಇಲ್ಲಿನ ಹೆಬ್ಬಾಳದಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ವತಿಯಿಂದ ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿರುವ ಮೂರು ದಿನಗಳ ‘ಮತ್ಸ್ಯಮೇಳ-2025ಕ್ಕೆ ಶುಕ್ರವಾರದಂದು ಚಾಲನೆ ದೊರೆಯಿತು.
ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ತಯಾರಿ, ಮಾರಾಟ, ರಫ್ತು ಮಾಡುವ ಉದ್ದೇಶದಿಂದ ಜನರಿಗೆ ಮೀನಿನ ವಿಶೇಷ ತಿಂಡಿಗಳನ್ನು ಈ ಸಲದ ಮತ್ಸ್ಯಮೇಳದಲ್ಲಿ ಪರಿಚಯಿಸಲಾಗಿದೆ. ಫಿಶ್ ಬಾಲ್ಸ್, ಫಿಶ್ ಬರ್ಗರ್, ಫಿಶ್ ಸ್ಯಾಂಡ್ ವಿಚ್ ಸೇರಿದಂತೆ ಕರಾವಳಿ ಭಾಗದ ವಿಶೇಷ ಮೀನಿನ ಉತ್ಪನ್ನಗಳನ್ನು ಹೆಚ್ಚಿನ ಪ್ರಚಾರದೊಂದಿಗೆ ಪರಿಚಯಿಸಲಾಗುತ್ತಿದೆ.
ಮೇಳದಲ್ಲಿ ಸುಮಾರು 100ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗಿದೆ. 50ಕ್ಕಿಂತ ಹೆಚ್ಚಿನ ಮಳಿಗೆಗಳು ಮೀನುಗಾರಿಕೆ ವಿಷಯಕ್ಕೆ ಸಂಬಂಧಿಸಿದ್ದಾಗಿವೆ. 14ಕ್ಕೂ ಹೆಚ್ಚು ಮಳಿಗೆಗಳಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆ ಹಾಗೂ ಕೇಂದ್ರ ಸರಕಾರ ಸೇರಿದಂತೆ ಇತರೆ ಸಂಸ್ಥೆಗಳ ಕುರಿತಾದ್ದಾಗಿದೆ. ಇನ್ನು ಉಳಿದ ಮಳಿಗೆಗಳಲ್ಲಿ ವಿವಿಧ ಬಗೆಯ ಅಕ್ವೇರಿಯಂಗಳನ್ನು ಮಾರಾಟಕ್ಕೆ ಇಡಲಾಗಿದೆ.
ರಾಜ್ಯ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆ ಹತ್ತು ಹಲವು ಮಾಹಿತಿಗಳನ್ನು ತಿಳಿಸಿಕೊಡುತ್ತದೆ. ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆಯೂ ವಿಸ್ತೃತ ಮಾಹಿತಿಯನ್ನು ಈ ಮಳಿಗೆ ತಿಳಿಸಿಕೊಡುವುದೇ ವಿಶೇಷತೆಯಿಂದ ಕೂಡಿದೆ. ಜೊತೆಗೆ ಅಚ್ಚರಿಯಿಂದ ಗಮನ ಸೆಳೆಯುವಂತಹದ್ದು ಮೀನುಗಾರಿಕೆಯಲ್ಲಿ ಬಳಸುವ ಸಾಧನಗಳನ್ನು ಮಳಿಗೆಯಲ್ಲಿ ವೀಕ್ಷಿಸಬಹುದಾಗಿದೆ.
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ, ಹೆಬ್ಬಾಳದ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಕೇಂದ್ರ ಸರಕಾರದ ಮೀನುಗಾರಿಕೆ ಸಂಬಂಧ ಯೋಜನೆಗಳನ್ನು ಒಳಗೊಂಡು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಇತರೆ ಮಳಿಗೆಗಳಲ್ಲಿನ ಮಾಹಿತಿಯನ್ನು ಮತ್ಸ್ಯಮೇಳಕ್ಕೆ ಆಗ ಮಿಸಿದ್ದವರು ಕೇಳಿ ತಿಳಿದುಕೊಳ್ಳುತ್ತಿದ್ದರು.
ವಿವಿಧ ಮಳಿಗೆಗಳಲ್ಲಿದ್ದ ಅಕ್ವೇರಿಯಂಗಳು ಮತ್ಸ್ಯಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ನಾನಾ ಬಗೆಯ ಅಕ್ವೇರಿಯಂಗಳಲ್ಲಿ ಇಡಲಾಗಿದ್ದ ಮೀನುಗಳು ಮೇಳಕ್ಕೆ ಬಂದವರನ್ನು ಆಸಕ್ತಿಯಿಂದ ವೀಕ್ಷಿಸುವಂತೆ ಮಾಡಿದ್ದವು. 150 ರೂ.ಗಳಿಂದ ಹಿಡಿದು 6.5 ಲಕ್ಷ ರೂ.ಗಳವರೆಗಿನ ಅಕ್ವೇರಿಯಂಗಳನ್ನು ಮಳಿಗೆಗಳಲ್ಲಿ ಪ್ರದರ್ಶನ ಜೊತೆಗೆ ಮಾರಾಟಕ್ಕೆ ಇಡಲಾಗಿತ್ತು.
ಇದೇ ವೇಳೆ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್‍ಕುಮಾರ್ ಕಳ್ಳೇರಿ ಮಾತನಾಡಿ, ರಾಜ್ಯವು ಮೀನು ಉತ್ಪಾದನೆಯಲ್ಲಿ ಕಳೆದ ಐದು ವರ್ಷದಲ್ಲಿ 56,182.26 ಕೋಟಿ ರೂ.ಗಳ ಮೌಲ್ಯದ 49,91,381 ಮೆಟ್ರಿಕ್ ಟನ್ ಮೀನನ್ನು ಉತ್ಪಾದಿಸಿದ್ದು, ದೇಶದಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ. ಮೀನಿನ ಮೌಲ್ಯವರ್ಧಿತ ಉತ್ಪಾದನೆ ಮತ್ತು ಮಾರಾಟಕ್ಕೆ ಒತ್ತು ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಮೀನು ಉತ್ಪಾದನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮೇಳದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕ ಯು.ಮಹೇಶ್‍ಕುಮಾರ್, ಮಿನುಗಾರಿಕೆ ಇಲಾಖೆಯ ಸಹ ನಿರ್ದೇಶಕಿ ಯಶಸ್ವಿನಿ ಸೇರಿದಂತೆ ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಇದ್ದರು.







