ಹಜ್ ಯಾತ್ರೆ-2026 : ಈಗಾಗಲೇ ಹಣ ಪಾವತಿಸಿರುವವರಿಗೆ ಆದ್ಯತೆ ನೀಡುವಂತೆ ಕೆಎಸ್ಎಚ್ಒಎ ಮನವಿ

PC : PTI
ಬೆಂಗಳೂರು : ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಭಾಗಶಃ ಅಥವಾ ಪೂರ್ಣ ಪ್ರಮಾಣದ ಹಣ ಪಾವತಿಸಿಯೂ ಸೌದಿ ಅರೇಬಿಯಾ ಸರಕಾರದ ನುಸುಕ್ ಪೋರ್ಟಲ್ನ ತಾಂತ್ರಿಕ ಸಮಸ್ಯೆಯಿಂದಾಗಿ ಯಾತ್ರೆ ಕೈಗೊಳ್ಳಲು ಸಾಧ್ಯವಾಗದವರಿಗೆ, ಮುಂದಿನ ಸಾಲಿನ ಹಜ್ ಯಾತ್ರೆಗೆ ಆದ್ಯತೆ ಮೇಲೆ ಪರಿಗಣಿಸುವಂತೆ ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್(ಕೆಎಸ್ಎಚ್ಒಎ) ಮನವಿ ಮಾಡಿದೆ.
2025ನೇ ಸಾಲಿನ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ಸರಕಾರವು ಭಾರತಕ್ಕೆ 1.75,025 ಯಾತ್ರಿಗಳ ಕೋಟಾವನ್ನು ಒದಗಿಸಿತ್ತು. ಈ ಪೈಕಿ ಭಾರತೀಯ ಹಜ್ ಸಮಿತಿ ವತಿಯಿಂದ 1,22,517(ಶೇ.70) ಹಾಗೂ ಖಾಸಗಿ ಹಜ್ ಟೂರ್ ಆಪರೇಟರ್ಗಳ ಮೂಲಕ 52,507 (ಶೇ.30)ಯಾತ್ರಿಗಳು ಪ್ರಯಾಣ ಬೆಳೆಸಬೇಕಿತ್ತು ಎಂದು ಕೆಎಸ್ಎಚ್ಒಎ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದೀಖಿ ತಿಳಿಸಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಹಾಗೂ ಸೌದಿ ಅರೇಬಿಯಾದ ಪ್ರಾಧಿಕಾರಗಳ ಜೊತೆ ನಿರಂತರ ಸಂವಹನ ನಡೆಸಿದರೂ ನುಸುಕ್ ಪೋರ್ಟಲ್ ತೆರೆಯಲಿಲ್ಲ. ಈ ನಡುವೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಮಧ್ಯಪ್ರವೇಶದಿಂದಾಗಿ ಖಾಸಗಿ ಟೂರ್ ಆಪರೇಟರ್ಗಳ ಮೂಲಕ ಕೇವಲ 10 ಸಾವಿರ ಮಂದಿ ಮಾತ್ರ ಈ ಬಾರಿ ಹಜ್ ಪ್ರಯಾಣ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಗಳ ನುಡುವೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಈ ವರ್ಷ ನಿಗದಿಯಾಗಿರುವ ಕೋಟಾವನ್ನೇ ಸಂಬಂಧಪಟ್ಟ ಸಿಎಚ್ಜಿಒಗಳಿಗೆ 2026ನೇ ಸಾಲಿನ ಹಜ್ ಯಾತ್ರೆಗೆ ಹಂಚಿಕೆ ಮಾಡಿರುವುದಾಗಿ ಎ.22ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ ಎಂದು ಇಕ್ಬಾಲ್ ಅಹ್ಮದ್ ಸಿದ್ದೀಖಿ ತಿಳಿಸಿದ್ದಾರೆ.
ಮನವಿ: ಯಾತ್ರಿಕರ ಹಣ ನುಸುಕ್ ವಾಲೆಟ್ನಲ್ಲಿ ತಡೆ ಹಿಡಿದಿರುವ ಬಗ್ಗೆ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಸ್ಪಷ್ಟನೆ ನೀಡಬೇಕು. ಈ ಹಣವನ್ನು 2026ನೇ ಸಾಲಿನ ಹಜ್ ವ್ಯವಸ್ಥೆಗಳಿಗೆ ಸಂಪೂರ್ಣವಾಗಿ ಬಳಸಲು ಅವಕಾಶ ನೀಡಬೇಕು. ಸಿಎಚ್ಜಿಒಗಳು ಯಾತ್ರಿಕರ ಹಣವನ್ನು ಹಿಂತಿರುಗಿಸಲು ಬಯಸಿದರೆ ನುಸುಕ್ ವಾಲೆಟ್ನಿಂದ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೇ, ಹಜ್-2023 ಮತ್ತು ಹಜ್-2024ರಲ್ಲಿ ಸಂಗ್ರಹಿಸಲಾಗಿರುವ ಅನೇಕ ಕೋಟ್ಯಂತರ ಸೌದಿ ರಿಯಾಲ್ಗಳು ಇ-ಹಜ್ ಪೋರ್ಟಲ್ನಲ್ಲಿದ್ದು ಇನ್ನೂ ಹಿಂತಿರುಗಿಸಿಲ್ಲ, ಇದನ್ನು ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಹಾಗೂ ಜಿದ್ದಾದಲ್ಲಿರುವ ಸಿಜಿಐ ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಇಕ್ಬಾಲ್ ಅಹ್ಮದ್ ಸಿದ್ದೀಖಿ ಆಗ್ರಹಿಸಿದ್ದಾರೆ.
ಈ ವರ್ಷ ಹಣ ಪಾವತಿ ಮಾಡಿಯೂ ತಾಂತ್ರಿಕ ಕಾರಣಗಳಿಂದಾಗಿ ಸಾವಿರಾರು ಮಂದಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದುದರಿಂದ, ಕೇಂದ್ರ ಸರಕಾರವು ಅಂತಹ ಯಾತ್ರಿಕರಿಗೆ ಆದ್ಯತೆ ಮೇರೆಗೆ ಪರಿಗಣಿಸುವುದಾಗಿ ತಿಳಿಸಿದೆ. ಆದುದರಿಂದ, ಖಾಸಗಿ ಟೂರ್ ಆಪರೇಟರ್ಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳಲು ಬಯಸುವವರು ಈಗಿನಿಂದಲೇ ತಮ್ಮ ಟೂರ್ ಆಪರೇಟರ್ಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದು ಉತ್ತಮ.
-ಶೌಕತ್ ಅಲಿ ಸುಲ್ತಾನ್, ಅಧ್ಯಕ್ಷ, ಕೆಎಸ್ಎಚ್ಒ







