ಭಾರತ್ ಟೆಕ್ಸ್-2026: ಕರ್ನಾಟಕದಲ್ಲಿ 2,821 ಕೋಟಿ ರೂ.ಹೂಡಿಕೆಗೆ ಒಪ್ಪಂದ; 11 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ

ಹೊಸದಿಲ್ಲಿ : ವಿಶ್ವದ ಪ್ರಮುಖ ಟೆಕ್ಸ್ ಟೈಲ್ ಸಮಾವೇಶವಾದ ‘ಭಾರತ್ ಟೆಕ್ಸ್-2026'ರಲ್ಲಿ ಕರ್ನಾಟಕ ರಾಜ್ಯವು ಉತ್ತಮ ಸಾಧನೆ ಮಾಡಿದ್ದು, ವಿವಿಧ ಸಂಸ್ಥೆಗಳೊಂದಿಗೆ 2,821ಕೋಟಿ ರೂ.ಮೌಲ್ಯದ 12 ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಹೂಡಿಕೆಯಿಂದ ರಾಜ್ಯದಲ್ಲಿ 11,020ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಬುಧವಾರ ದಿಲ್ಲಿಯಲ್ಲಿ ಭಾರತ್ ಮಂಡಪದಲ್ಲಿ ಆಯೋಜಿಸಲಾಗಿದ್ದ‘Investment Opportunities in Karnataka & MoU Signing’ ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹಾಗೂ ಜವಳಿ ಅಭಿವೃದ್ಧಿ ಆಯುಕ್ತ ಮತ್ತು ಕೈಮಗ್ಗ ಹಾಗೂ ಜವಳಿ ನಿರ್ದೇಶಕ ಎ.ಬಿ.ಬಸವರಾಜು ಸಮ್ಮುಖದಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಹೂಡಿಕೆಗೆ ಕರ್ನಾಟಕವೇ ಶ್ರೇಷ್ಠ ತಾಣ: ಕಾರ್ಯಕ್ರಮದಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ರೋಹಿಣಿ ಸಿಂಧೂರಿ, ‘ಜವಳಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕರ್ನಾಟಕವು ದೇಶದಲ್ಲೇ ಅತ್ಯುತ್ತಮ ತಾಣವಾಗಿದೆ. ಕರ್ನಾಟಕ ಕೇವಲ ಗಾರ್ಮೆಂಟ್ಸ್ ಉತ್ಪಾದನೆಯ ಮುಂಚೂಣಿಯ ರಾಜ್ಯವಲ್ಲ, ಕಚ್ಚಾ ನಾರಿನಿಂದ ಹಿಡಿದು ವಿಶ್ವಮಟ್ಟದ ಉಡುಪು ಉತ್ಪಾದನೆಯವರೆಗೆ ಸಂಪೂರ್ಣ ‘ಫೈಬರ್ ಟು ಫ್ಯಾಷನ್' ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಹೂಡಿಕೆ, ಉತ್ಪಾದನೆ-ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ರಾಜ್ಯವು ಉತ್ತಮ ತಾಣವಾಗಿದೆ ಎಂದು ಬಣ್ಣಿಸಿದರು.
5 ಲಕ್ಷ ಉದ್ಯೋಗದ ಗುರಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರೂಪಿಸಲಾಗುತ್ತಿರುವ ‘ಕರ್ನಾಟಕ ಜವಳಿ ಮತ್ತು ಉಡುಪು ನೀತಿ-2026-31' ರಾಜ್ಯದ ಜವಳಿ ಕ್ಷೇತ್ರಕ್ಕೆ ದಿಕ್ಸೂಚಿಯಾಗಲಿದೆ. ಮುಂದಿನ 5 ವರ್ಷಗಳಲ್ಲಿ 20 ಸಾವಿರ ಕೋಟಿ ರೂ.ಹೂಡಿಕೆ ಆಕರ್ಷಿಸಿ, 5ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರಕಾರ ಹೊಂದಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಸೇರಿದಂತೆ ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಜವಳಿ ಕೈಗಾರಿಕೆಗಳ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಉದ್ಯಮಿಗಳಿಗೆ ಏಕಗವಾಕ್ಷಿ ತ್ವರಿತ ಅನುಮೋದನೆ, ಪ್ಲಗ್-ಆಂಡ್-ಪ್ಲೇ ಕೈಗಾರಿಕಾ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ, ವಲಯವಾರು ಪ್ರೋ ತ್ಸಾಹಧನ ಹಾಗೂ ಸುಸ್ಥಿರ ಉತ್ಪಾದನೆಗೆ ಸರಕಾರವು ಉತ್ತೇಜನ ನೀಡುತ್ತಿದೆ ಎಂದ ಅವರು, ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 1ಸಾವಿರ ಎಕರೆ ವಿಸ್ತೀರ್ಣದ ‘ಪಿಎಂ ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್', ಜೊತೆಗೆ ದೊಡ್ಡಬಳ್ಳಾಪುರ, ಶಿಗ್ಗಾವಿ, ದಾವಣಗೆರೆಯಲ್ಲಿರುವ ಜವಳಿ ಪಾರ್ಕ್‍ಗಳು ಕರ್ನಾಟಕವನ್ನು ದೇಶದ ಪ್ರಮುಖ ಜವಳಿ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜವಳಿ ಕ್ಷೇತ್ರದ ಪ್ರಮುಖ ಉದ್ಯಮಿಗಳಾದ ಶಾಹಿ ಎಕ್ಸ್ ಪೋರ್ಟ್ಸ ನ ಆನಂದ ಪದ್ಮನಾಭನ್, ಟೆಕ್ಸ್ ಪೋರ್ಟ್ಸ ಇಂಡಸ್ಟ್ರೀಸ್‍ನ ನರೇನ್ ಗೋಯೆಂಕಾ, ಗೋಕಲ್ ದಾಸ್ ಎಕ್ಸ್ ಪೋರ್ಟ್ಸ ನ ಪ್ರಭಾತ್ ಕುಮಾರ್ ಸಿಂಗ್, ಮಂಜುಶ್ರೀ ಸ್ಪಿನ್‍ಟೆಕ್‍ನ ವಿಮಲ್ ಕೇಡಿಯಾ ಸೇರಿದಂತೆ ಹಲವರು ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ಹಾಗೂ ಸರಕಾರದ ಹೊಸ ಜವಳಿ ನೀತಿಯ ಕುರಿತು ಮಾತನಾಡಿದರು.






