ಹಾಸನ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಹಿಳಾ ಸಮಾವೇಶ

ಹಾಸನ, ಆ.11: ವಕ್ಫ್ ತಿದ್ದುಪಡಿ ಮಸೂದೆ-2025 ವಿರೋಧಿಸಿ, ನಗರದ ತಾಜ್ ಕನ್ವೆನ್ಷನ್ ಹಾಲ್‌ನಲ್ಲಿ ‘ವಕ್ಫ್ ರಕ್ಷಣೆ’ ಎಂಬ ಘೋಷಣೆಯೊಂದಿಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಾಸನ ಘಟಕದಿಂದ ಮಹಿಳಾ ಸಮ್ಮೇಳನ ನಡೆಯಿತು.
ಈ ಸಮ್ಮೇಳನದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಯೂಸುಫ್ ಕಾಣಿ, ‘‘ವಕ್ಫ್ ರಕ್ಷಣೆ ನಮ್ಮೆಲ್ಲರ ಹೊಣೆ. ಕೇಂದ್ರದ ಬಿಜೆಪಿ ಸರಕಾರ ವಕ್ಫ್ ತಿದ್ದುಪಡಿ ಮಸೂದೆ-2025 ಜಾರಿಗೊಳಿಸಿದೆ. ಈ ಮಸೂದೆ ಪ್ರಸ್ತುತ ನ್ಯಾಯಾಲಯದಲ್ಲಿದೆ. ಆದರೂ, ದೇಶದ ಮುಸ್ಲಿಮರು ಯಾವುದೇ ಕಾರಣಕ್ಕೂ ಈ ಮಸೂದೆಯನ್ನು ಒಪ್ಪುವುದಿಲ್ಲ. ಈ ಮಸೂದೆ ವಿರುದ್ಧ ದೇಶಾದ್ಯಂತ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಿಂದ ಪ್ರತಿಭಟನೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತಿವೆ’’ ಎಂದರು.
ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರೊಫೆಸರ್ ಸೈಯ್ಯದಾ ಸಾದಿಯಾ ಮಾತನಾಡಿ, ‘‘ವಕ್ಫ್ ತಿದ್ದುಪಡಿ ಮಸೂದೆ-2025 ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಈ ಕಾನೂನಿನ ವಿರುದ್ಧ ಹೋರಾಡಲು ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿರಬೇಕು. ಕೇಂದ್ರದ ಬಿಜೆಪಿ ಸರಕಾರ ಮುಸ್ಲಿಮರ ವಕ್ಫ್ ಆಸ್ತಿಗಳ ಮೇಲೆ ಕಣ್ಣಿಟ್ಟಿದೆ. ಮೋದಿ ಮತ್ತು ಅಮಿತ್ ಶಾ ಅವರು ವಕ್ಫ್ ತಿದ್ದುಪಡಿ ಮಸೂದೆೆ-2025 ಜಾರಿಗೊಳಿಸಿ, ಮುಸ್ಲಿಮರ ಏಳಿಗೆಗೆ ಕೆಲಸ ಮಾಡುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಆದರೆ, ಅಸ್ಸಾಂ, ದಿಲ್ಲಿ, ಹರಿಯಾಣ, ಗುಜರಾತ್‌ನಂತಹ ರಾಜ್ಯಗಳಲ್ಲಿ ಮುಸ್ಲಿಮರ ಮನೆಗಳ ಮೇಲೆ ಬುಲ್ಡೋಝರ್ ಕಾರ್ಯಾಚರಣೆ ಏಕೆ ನಡೆಯುತ್ತಿದೆ? ಇದನ್ನು ಏಕೆ ನಿಲ್ಲಿಸಿಲ್ಲ?’’ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಜ್ಮಾ ನಝೀರ್ ಮಾತನಾಡಿ, ‘‘ವಕ್ಫ್ ಆಸ್ತಿಗಳು ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಹಿತಾಸಕ್ತಿಗೆ ಸೇರಿವೆ. ಕಾನೂನು ಬದಲಾವಣೆಗಳ ಮೂಲಕ ಇವುಗಳಿಗೆ ಹಾನಿಯುಂಟುಮಾಡುವ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸಬೇಕು’’ ಎಂದರು.
‘ವಕ್ಫ್ ಉಳಿಸಿ, ಸಂವಿಧಾನ ಉಳಿಸಿ’ ಎಂಬ ಘೋಷಣೆಯೊಂದಿಗೆ, ಸಮುದಾಯದ ಏಕತೆ, ಜಾಗೃತಿ ಮತ್ತು ಹೋರಾಟದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಡಬ್ಲ್ಯೂಐಎಂ ಜಿಲ್ಲಾಧ್ಯಕ್ಷೆ ಆಫ್ರೋಝ್ ಬೇಗಂ, ರಾಜ್ಯ ಡಬ್ಲ್ಯೂಐಎಂ ಮಾಧ್ಯಮ ಸಂಯೋಜಕಿ ರೂಬಿ ವಾಹಿದ್, ಎಸ್‌ಡಿಪಿಐ ಹಾಸನ ಜಿಲ್ಲಾ ಕಾರ್ಯದರ್ಶಿ ಸಾಹಿರಬಾನು,ಜಮಾಅತೆ ಇಸ್ಲಾಮಿಕ್ ಅಧ್ಯಕ್ಷೆ ನಾಝಿಯಾ ಮಸ್ರುರ್, ಆಫ್ಸರ್ ಸಯ್ಯಿದಾ, ಜೆಐಎಚ್ ಸದಸ್ಯೆ ಹಾಜಿರಾ ನಸೀಮಾ, ಡಾ. ಫೈಝಿಯಾ ಖಮರ್, 17ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯೆ ರೂಹಿ ಆಸಿಫ್ ಮತ್ತಿತರರು ಉಪಸ್ಥಿತರಿದ್ದರು. ಮುಫ್ತಿ ರಿಯಾಝ್ ಮೌಲನ ಕಾರ್ಯಕ್ರಮವನ್ನು ನಿರೂಪಿಸಿ,ಮುಫ್ತಿ ಅಶ್ವಕ್ ಮೌಲನ ಧನ್ಯವಾದ ಸಲ್ಲಿಸಿದರು.







