ಸಂವಿಧಾನ ವಿರೋಧಿ ಹೇಳಿಕೆ ಆರೋಪ | ಪರಿಷತ್ ಸ್ಥಾನದಿಂದ ಐವನ್ ಡಿಸೋಜಾ ವಜಾಕ್ಕೆ ಆಗ್ರಹ

ಬೆಂಗಳೂರು, ಆ.11: ದೇಶದ ಸಮಗ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ರಾಜ್ಯಪಾಲರ ಕುರಿತು ಸಾರ್ವಜನಿಕವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಆರೋಪದಡಿ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರನ್ನು ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕೆಂದು ಬಿಜೆಪಿ-ಜೆಡಿಎಸ್ ಸದಸ್ಯರು ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಗಿದ್ದು, 2024ರ ಸೆಪ್ಟೆಂಬರ್‌ನಲ್ಲಿ ಐವನ್ ಡಿಸೋಜಾ ಅವರು ಮಂಗಳೂರಿನ ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ‘ರಾಷ್ಟ್ರಪತಿಯವರು ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಬೇಕು, ಇಲ್ಲವಾದಲ್ಲಿ ಬಾಂಗ್ಲಾ ಅಧ್ಯಕ್ಷರು ರಾತ್ರೋರಾತ್ರಿ ಓಡಿಹೋದಂತೆ ಇಲ್ಲಿಯೂ ಕೂಡಾ ರಾಜ್ಯಪಾಲರು ರಾತ್ರೋರಾತ್ರಿ ಓಡಿಹೋಗುವಂತೆ ಮಾಡುತ್ತೇವೆ’ ಎಂದು ಉದ್ರೇಕಕಾರಿ ಭಾಷಣ ಮಾಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ರೀತಿಯ ಹೇಳಿಕೆಗಳು ರಾಷ್ಟ್ರದ ಏಕತೆ, ಭದ್ರತೆ ಹಾಗೂ ಸಾಮಾಜಿಕ ಸೌಹಾರ್ದಕ್ಕೆ ಗಂಭೀರ ಅಪಾಯಕಾರಿಯಾಗಿದ್ದು, ಸಮಾಜಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡುವಂತಿವೆ. ಆದ್ದರಿಂದ, ದೇಶದ ಏಕತೆ ಮತ್ತು ಸಂವಿಧಾನದ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಐವನ್ ಡಿಸೋಜಾ ಅವರನ್ನು ವಿಧಾನ ಪರಿಷತ್ ಸದಸ್ಯತ್ವದಿಂದ ತಕ್ಷಣ ವಜಾ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.





