ಪತ್ರಕರ್ತನನ್ನು ನಿಂದಿಸಿದ ಪ್ರತಾಪ್ ಸಿಂಹ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ : ಎಂ.ಲಕ್ಷ್ಮಣ್

ಮೈಸೂರು, ಸೆ.10 : ಮೈಸೂರು ಜಿಲ್ಲೆ ʼವಾರ್ತಾಭಾರತಿʼ ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಕುಮಾರ್ ಎನ್.ಎಸ್. ಅವರ ಬಗ್ಗೆ ಏಕವಚನದಲ್ಲಿ ನಿಂದಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಓರ್ವ ಹಿರಿಯ ಪತ್ರಕರ್ತರ ಬಗ್ಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಲ್ಲಿದ್ದ ಪತ್ರಕರ್ತರು ಅಲ್ಲೇ ಖಂಡಿಸಬೇಕಿತ್ತು. ಇತರ ಪತ್ರಕರ್ತರು ಸುಮ್ಮನಿದ್ದದ್ದು ನೋವುಂಟು ಮಾಡಿದೆ ಎಂದು ಹೇಳಿದರು.
ಘಟನೆ ಖಂಡಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾದ್ಯಮ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. 2013ರಲ್ಲಿ ದೇಶಾದ್ಯಂತ ಮೋದಿ ಅಲೆ ಇತ್ತು. ಕಜ್ಜಿ ನಾಯಿ ನಿಂತಿದ್ದರೂ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಸಹಮತ ಇದೆ ಎಂದು ಹೇಳಿದರು.
ಈ ಕಜ್ಜಿ ನಾಯಿ ಈಗ ಎಲ್ಲರನ್ನು ಕಚ್ಚುತ್ತಿದೆ. ಎಲ್ಲರನ್ನೂ ಬಯ್ಯುವುದನ್ನೇ ವೃತ್ತಿ ಮಾಡಿಕೊಂಡಿರುವ ಮೂರ್ಖ ಅವಿವೇಕಿ ಈ ಮಾಜಿ ಸಂಸದ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹನಿಗೆ ಕ್ಯಾಮರಾ ನೋಡಿದರೆ ದೆವ್ವ ಬಂದ ಹಾಗೆ ಆಗುತ್ತದೆ. ಅವನು ಮಾತ್ರ ಎಲ್ಲರನ್ನು ಬಯ್ಯುತ್ತಾನೆ. ಬೇರೆಯವರು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ಕೊಡುವ ಯೋಗ್ಯತೆ ಇಲ್ಲ. ಮೈಸೂರಿನ ಜನರು ಬಹಳ ತಾಳ್ಮೆಯಿಂದ ಇದ್ದಾರೆ. ತಾಳ್ಮೆ ಕಳೆದರೆ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ಅವರು ಎಚ್ಚರಿಸಿದರು.







