ಪತ್ರಕರ್ತನಿಗೆ ಅವಮಾನ ಪ್ರಕರಣ | ಪ್ರತಾಪ್ ಸಿಂಹ ಬಂಧನವಾಗಲಿ : ದಲಿತ ಮುಖಂಡರ ಒತ್ತಾಯ

ಪ್ರತಾಪ್ ಸಿಂಹ
ಮೈಸೂರು : ಹಿರಿಯ ಪತ್ರಕರ್ತ ʼವಾರ್ತಾಭಾರತಿʼ ಮೈಸೂರು ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಎನ್.ಎಸ್.ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿ ಅಪಮಾನಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ದಲಿತ ಸಂಘಟನೆಗಳ ಮುಖಂಡರು ಖಂಡಿಸಿ ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ʼವಾರ್ತಾಭಾರತಿʼ ದಿನಪತ್ರಿಕೆ ಮೈಸೂರು ಜಿಲ್ಲಾ ವರದಿಗಾರ ಸತೀಶ್ಕುಮಾರ್ ಎನ್.ಎಸ್. ಅವರನ್ನು ಅವಮಾನಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿರುವ ಪ್ರತಾಪ್ ಸಿಂಹ ತನ್ನದೇ ವೃತ್ತಿಯನ್ನು ಇನ್ನೊಬ್ಬ ವ್ಯಕ್ತಿಯನ್ನು ಏಕವಚನದಲ್ಲಿ ನಿಂದಿಸಿರುವುದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡಬೇಕಾದ್ದು ಪತ್ರಕರ್ತರ ಮೂಲಧರ್ಮ. ಪ್ರಶ್ನೆ ಕೇಳಿರುವುದಕ್ಕೆ ಉದ್ಧಟತನದಿಂದ ಉತ್ತರಿಸುವುದು ಅಕ್ಷಮ್ಯ ಎಂದು ಹೇಳಿದ್ದಾರೆ.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಪತ್ರಿಕಾ ಹೇಳಿಕೆ ನೀಡಿ, ಮಾಜಿ ಸಂಸದ ಪ್ರತಾಪ್ ಸಿಂಹ ಪತ್ರಿಕಾ ವರದಿಗಾರರ ಮೇಲೆ ಅಸಭ್ಯವಾಗಿ ವರ್ತಿಸುವುದು ಖಂಡನೀಯ, ಸದಾ ದ್ವೇಷ,ಅಸೂಯೆ, ಕೋಮುವಾದವನ್ನೇ ಉಸಿರಾಗಿಸಿಕೊಂಡು ಸಮಾಜದ ಶಾಂತಿ ಸೌಹಾರ್ದವನ್ನು ಕೆಡಿಸುತ್ತಿರುವ ಇಂತಹ ಕೋಮುವಾದಿ ಭಯೋತ್ಪಾದಕನನ್ನು ಪೋಲಿಸ್ ಇಲಾಖೆ ಹದ್ದು ಬಸ್ತಿನಲ್ಲಿಡಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ ಮೈಸೂರು ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಹೇಳಿಕೆ ನೀಡಿ, ವರದಿಗಾರ ಸತೀಶ್ ಕುಮಾರ್ ಎನ್.ಎಸ್ ಅವರ ಪ್ರಶ್ನೆಗೆ ಉತ್ತರಿಸಲಾಗದೆ ಉಡಾಫೆ ಮಾತನಾಡಿ ಪತ್ರಕರ್ತರನ್ನು ಅವಮಾನಿಸಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಕೋಮು ಸಂಘರ್ಷವನ್ನು ಉಂಟು ಮಾಡುತ್ತಿರುವ ಮತ್ತು ಪತ್ರಕರ್ತರನ್ನು ಸಾರ್ವಜನಿಕವಾಗಿ ಅವಮಾನಿಸಿರುವ ಪ್ರತಾಪ್ ಸಿಂಹ ಅವರನ್ನು ರಾಜ್ಯ ಸರಕಾರ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.







