ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆಗೆ ಒತ್ತಾಯ : ಜಾವೀದ್ ಖಾನ್

ಬೆಂಗಳೂರು, ಸೆ.13 : ರಾಜ್ಯಾದ್ಯಂತ ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ವಿಶೇಷ ಕಾಯ್ದೆ ತರಬೇಕು ಎಂದು ಅಲ್ಪಸಂಖ್ಯಾತರ ಸೌಹಾರ್ದ ಸಮಿತಿಯು ಮುಖ್ಯ ಸಂಯೋಜಕ ಜಾವೀದ್ ಖಾನ್ ಒತ್ತಾಯಿಸಿದ್ದಾರೆ.
ಶನಿವಾರ ಅಲ್ಪಸಂಖ್ಯಾತರ ಸೌಹಾರ್ದ ಸಮಿತಿಯು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ. ರಾಜ್ಯದಲ್ಲಿ ಕೆಲ ರಾಜಕಾರಣಿಗಳು ಮುಸ್ಲಿಮ್ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿ ಸಾರ್ವಜನಿಕರಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಮೈಸೂರು ದಸರಾ ಉತ್ಸವದಲ್ಲಿ ರಾಷ್ಟ್ರ ಮಟ್ಟದ ಗೌರವ ಪಡೆದ ಲೇಖಕಿ ಬಾನು ಮುಷ್ತಾಕ್ ಅವರ ಮೇಲೆ ಕೇವಲ ಧರ್ಮದ ಆಧಾರದ ಮೇಲೆ ಅವಹೇಳನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಸ್ಲಿಮ್ ಸಮುದಾಯದಲ್ಲಿ ಬಹುಮತ ಮಧ್ಯಮ ವರ್ಗದವರು ಕೂಲಿ-ನಾಲಿ, ಗ್ಯಾರೇಜ್ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಕೆಲ ಕೋಮುವಾದಿ ಕಿಡಿಗೇಡಿಗಳಿಂದ ಹಿಂದೂ-ಮುಸ್ಲಿಮ್ ಹೆಸರಲ್ಲಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡಿದ್ದಾರೆ. ಅಷ್ಟೇ ಅಲ್ಲದೇ ಸರಕಾರಿ ನೌಕರಿಯಲ್ಲಿ ಮುಸ್ಲಿಮ್ ನೌಕರರ ಮೇಲೆ ಜಾತಿ ನಿಂದನೆ, ಲೈಂಗಿಕ ಕಿರುಕುಳ ಪ್ರಕರಣಗಳ ನಡೆಯುತ್ತಿವೆ. ಆದುದರಿಂದ ಸಮುದಾಯದ ಹಕ್ಕು, ಗೌರವ ಮತ್ತು ಭದ್ರತೆಗೆ ‘ಅಲ್ಪಸಂಖ್ಯಾತರ ದೌರ್ಜನ್ಯ ತಡೆ ಕಾಯ್ದೆ’ ತರಬೇಕು ಎಂದು ಜಾವೇದ್ ಖಾನ್ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸೌಹಾರ್ದ ಸಮಿತಿ ಸಂಯೋಜಕ ಆಲಂ ಘನಿ, ಸದಸ್ಯರಾದ ಮಾಸ್ತನ್ ನಾಯಕ ಖಾನಾಪುರ, ತಾಜುದ್ದೀನ್, ಎಂ.ಡಿ.ಸಲೀಂ ಸೇರಿದಂತೆ ಹಲವರು ಇದ್ದರು.







