ಬಹುಜನ ಒಕ್ಕೂಟ ಮುನ್ನಡೆಸುವಂತೆ ದಲಿತ, ಹಿಂದುಳಿದ ನಾಯಕರಿಗೆ ಮುಹಮ್ಮದ್ ನಝೀರ್ ಅಹ್ಮದ್ ಕರೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.27: ರಾಷ್ಟ್ರಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಬಹುಜನ ಒಕ್ಕೂಟವನ್ನು ಮುನ್ನಡೆಸುವಂತೆ ರಾಜ್ಯದ ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರಿಗೆ ಭಾರತೀಯ ಬಹುಜನ ಒಕ್ಕೂಟದ ರಾಜ್ಯ ಸಂಚಾಲಕ ಮುಹಮ್ಮದ್ ನಝೀರ್ ಅಹ್ಮದ್ ಕರೆ ನೀಡಿದ್ದಾರೆ.
ಈ ಸಂಬಂಧ ಪ್ರಕಟನೆ ಹೊರಡಿಸಿದ ಅವರು, ಪ್ರಮುಖವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್ ಅವರ ಕುಟುಂಬ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ದೇಶದ ಜನಸಂಖ್ಯೆಯಲ್ಲಿ ಶೇ.90ರಷ್ಟಿರುವ ಬಹುಜನರನ್ನು ಪ್ರತಿನಿಧಿಸಲು ಮುಂದೆ ಬನ್ನಿ ಎಂದು ಆಹ್ವಾನಿಸಿದ್ದಾರೆ.
ನಿಮಗೆ ನಿಮ್ಮದೇ ಆದ ರಾಜಕೀಯ ವೇದಿಕೆ ಇರಲಿಲ್ಲ. ಆದರೆ, ಈಗ ರಾಷ್ಟ್ರಮಟ್ಟದಲ್ಲಿ 38 ಪಕ್ಷಗಳ ಭಾರತೀಯ ಬಹುಜನ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಕೇಂದ್ರದ ಮಾಜಿ ಸಚಿವರು, ಸಂಸದರು ಕೈ ಜೋಡಿಸಿ ಬಹುಜನ ಒಕ್ಕೂಟವನ್ನು ಬಲಪಡಿಸುತ್ತಿದ್ದಾರೆ ಎಂದು ಮುಹಮ್ಮದ್ ನಝೀರ್ ಅಹ್ಮದ್ ತಿಳಿಸಿದ್ದಾರೆ.
ಈ ಒಕ್ಕೂಟದ ರಾಜ್ಯ ಸಂಚಾಲಕನಾಗಿ ನಾನು ನಿಮ್ಮನ್ನೆಲ್ಲ ಆಹ್ವಾನಿಸುತ್ತಿದ್ದೇನೆ. ದೇಶದ ಪ್ರಗತಿ ಹಾಗೂ ಜನರ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲ ಒಂದಾಗಬೇಕಿದೆ. ಜಾತ್ಯತೀತ ಹಾಗೂ ಕೋಮುವಾದದ ರಾಜಕೀಯವೆ ದೇಶದಲ್ಲಿನ ಎಲ್ಲ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಈ ರಾಜಕೀಯವನ್ನು ಸೋಲಿಸಿ, ಸಮಾಜದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ತರೋಣ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







