ಡಿಸಿಎಂ 'ಬೆಂಗಳೂರು ನಡಿಗೆ'ಗೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಶಾಸಕ ಮುನಿರತ್ನರಿಂದ ಆಕ್ರೋಶ

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತಿಕೆರೆ ಜೆ.ಪಿ. ಪಾರ್ಕ್ ಪ್ರದೇಶದಲ್ಲಿ ರವಿವಾರ ನಡೆಸುತ್ತಿದ್ದ 'ಬೆಂಗಳೂರು ನಡಿಗೆ' ಜನರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ. ಶಾಸಕನಾಗಿರುವ ತನಗೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಶಾಸಕ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಡಿಸಿಎಂ ವೇದಿಕೆಯಲ್ಲಿ ಜನರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ, ಆರೆಸ್ಸೆಸ್ ಗಣವೇಷಧಾರಿಯಾಗಿ ಮುನಿರತ್ನ ಜನರ ನಡುವೆ ಕುಳಿತಿದ್ದಾರೆ. ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್, 'ಕರಿಟೋಪಿ ಶಾಸಕರೇ ಬನ್ನಿ ಮೇಲೆ'... ಎಂದು ಕರೆದಿದ್ದಾರೆ. ಈ ವೇಳೆ ನೇರವಾಗಿ ಎದ್ದು ವೇದಿಕೆ ಏರಿದ ಮುನಿರತ್ನ ಡಿಸಿಎಂ ಕೈಯಲ್ಲಿ ಮೈಕ್ ಕೇಳಿದ್ದಾರೆ. ಇಲ್ಲ, ಆಮೇಲೆ ಕೊಡ್ತೀನಿ ಎಂದು ಡಿಕೆಶಿ ಪಟ್ಟು ಹಿಡಿದಿದ್ರು. ಈ ವೇಳೆ ಮುನಿರತ್ನರವರು ಡಿಸಿಎಂ ಕೈಯಲ್ಲಿದ್ದ ಮೈಕ್ ಅನ್ನು ಕಿತ್ತುಕೊಂಡು ಜನರನ್ನು ಉದ್ದೇಶಿಸಿ ಮಾತನಾಡಿದರು.
ನಾನು ಜನಪ್ರತಿನಿಧಿ. ಆದರೆ ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲ. ಹಾಗಾಗಿ ನಾಡಿನ ಪ್ರಜೆಯಾಗಿ ಬಂದು ನಿಮ್ಮ ಸಾಮಾನ್ಯನಾಗಿ ಜತೆ ಕುಳಿತು ಕೊಳ್ಳುತ್ತೇನೆ ಎಂದು ಆಕ್ರೋಶ ಹೊರ ಹಾಕಿದರು.
ಸರಕಾರದ ಕಾರ್ಯಕ್ರಮವಾಗಿದ್ದರೆ ಸಂಸದ, ಸ್ಥಳೀಯ ಶಾಸಕರಿಗೆ ಆಹ್ವಾನ ಇಲ್ಲ. ಇದು ಹೇಗೆ ಸರಕಾರಿ ಕಾರ್ಯಕ್ರಮ ಆಗುತ್ತದೆ? ಇದು ಕಾಂಗ್ರೆಸ್ ಕಾರ್ಯಕ್ರಮ ಎಂದು ಜೋರಾಗಿ ಕೂಗಾಡಿದರು.
ಬಳಿಕ ಮುನಿರತ್ನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವೇದಿಕೆ ಮೇಲೆಯೇ ತಳ್ಳಾಟ ನೂಕಾಟ ನಡೆಯಿತು.ಮೈಕ್ ಆಫ್ ಮಾಡಿ ಮುನಿರತ್ನ ಕೈಯಿಂದ ಮೈಕ್ ಕಿತ್ತುಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ಮುನಿರತ್ನರನ್ನು ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ. ಬಳಿಕ ಮುನಿರತ್ನ ಸ್ಥಳದಲ್ಲಿ ಧರಣಿ ಕುಳಿತಿದ್ದರು.
ಸ್ಥಳೀಯ ಶಾಸಕನಾಗಿ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದ್ದೆ. ನನ್ನನ್ನು ಒದೆಯಲಾಗಿದೆ. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಮುನಿರತ್ನ ಆರೋಪ ಮಾಡಿದರರು.
ಬಳಿಕ ಡಿಸಿಎಂ ಡಿಕೆಶಿ ಕಾರ್ಯಕ್ರಮ ಮುಂದುವರಿಸಿದರು.







