ಎಂ.ಕೆ.ರಮೇಶ ಆಚಾರ್ಯಗೆ ʼಪಾರ್ತಿಸುಬ್ಬ ಪ್ರಶಸ್ತಿʼ : ತಲ್ಲೂರು ಶಿವರಾಮ ಶೆಟ್ಟಿ

ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡಮಿಯ 2026ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿಗೆ ಎಂ.ಕೆ.ರಮೇಶ ಆಚಾರ್ಯ ತೀರ್ಥಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಿಗೆ 1ಲಕ್ಷ ರೂ. ನಗದು ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಫಲ ತಾಂಬೂಲ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಕಾಡಮಿಯ ಗೌರವ ಪ್ರಶಸ್ತಿಗೆ ಜಪ್ಪು ದಯಾನಂದ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣಮಯ್ಯ, ಪದ್ಮನಾಭ ಉಪಾಧ್ಯಾಯ, ಮಹಾಬಲ ದೇವಾಡಿಗ, ದೊಡ್ಡಮಲ್ಲಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ರಾಘವೇಂದ್ರ ಆಸ್ರಣ್ಣ, ಪೂರ್ಣಿಮಾ ಯತೀಶ್ ರೈ, ದುರ್ಗಾಪರಮೇಶ್ವರಿ ಕುಕ್ಕಿಲ, ಉಜಿರೆ ನಾರಾಯಣ ಪೂಜಾರಿ, ವಿದ್ವಾನ್ ಲಕ್ಷ್ಮೀ ನಾರಾಯಣ ಉಪಾಧ್ಯ, ಹೆರಿಯ ನಾಯ್ಕ ಮೊಗೆಬೆಟ್ಟು, ರಾಮಗೌಡ ಗುಣವಂತೆ, ಪಡ್ರೆ ಕುಮಾರ, ಸುರೇಶ ಕುಪ್ಪೆಪದವು, ಶಿವಯ್ಯ ಅವರು ಆಯ್ಕೆಯಾಗಿದ್ದಾರೆ. ಯಕ್ಷಸಿರಿ ಪ್ರಶಸಿ ತಲಾ 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಭೀಮಣ್ಣ ಹಾಗೂ ಡಾ.ತಲ್ಲೂರು ಶಿವರಾಮ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿಗೆ ಸಂಶೋಧಕ ಪ್ರೊ.ಎಂ.ಎನ್.ವೆಂಕಟೇಶ ಅವರನ್ನು ಆಯ್ಕೆ ಮಾಡಲಾಗಿದೆ. ದತ್ತಿನಿಧಿ ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಒಳಗೊಂಡಿವೆ ಎಂದು ಹೇಳಿದ್ದಾರೆ.






