ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಾಸಕ ಕೆ.ಸಿ.ವೀರೇಂದ್ರಗೆ ಸೇರಿದ 23.35ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ

ಕೆ.ಸಿ. ವೀರೇಂದ್ರ
ಬೆಂಗಳೂರು : ಆನ್ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಈ.ಡಿ) ಅಧಿಕಾರಿಗಳು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರಿಗೆ ಸೇರಿದ ಸುಮಾರು 23.35 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
ಆನ್ಲೈನ್ ಜೂಜಿನ ವೇದಿಕೆಗಳ ಮೂಲಕ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸುಲಿಗೆ ಆರೋಪದ ಮೇಲೆ ದಾಖಲಾದ ಎಫ್ಐಆರ್ಗಳ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾದ ಬೆಟ್ಟಿಂಗ್ ವೆಬ್ಸೈಟ್ಗಳು, ಪಾವತಿ ಗೇಟ್ವೇಗಳು ಮತ್ತು ಮ್ಯೂಲ್ ಖಾತೆಗಳ ರಾಷ್ಟ್ರವ್ಯಾಪಿ ಜಾಲವನ್ನು ತನಿಖೆ ಮಾಡಲಾಗುತ್ತಿದೆ ಎಂದು ಈ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ಕಿಂಗ್ 567 ಸೇರಿದಂತೆ ಅಕ್ರಮ ಆನ್ಲೈನ್ ಬೆಟ್ಟಿಂಗ್ ವೇದಿಕೆಗಳನ್ನು ಪಾವತಿ ಗೇಟ್ವೇಗಳು, ಶೆಲ್ ಕಂಪೆನಿಗಳ ಮೂಲಕ ನಿರ್ವಹಿಸುತ್ತಿದ್ದರು. ಆ ಮೂಲಕ ಆಟಗಾರರಿಗೆ ಹಣವನ್ನು ಠೇವಣಿ ಮಾಡಲು ಪ್ರೇರೇಪಿಸಲಾಗುತ್ತಿತ್ತು. ಆದರೆ ಹಿಂಪಡೆಯುವುದನ್ನು ನಿಬಂರ್ಧಿಸಲಾಗಿತ್ತು. ಪ್ರಸ್ತುತ ತನಿಖೆಯಿಂದ 2,300 ಕೋಟಿ ರೂ.ಗೂ ಹೆಚ್ಚಿನ ಅಕ್ರಮ ಆದಾಯ ಗಳಿಸಿರುವುದು ಬಹಿರಂಗವಾಗಿದೆ.
ನಿರ್ದೇಶನಾಲಯವು ಈ ಹಿಂದೆ 319.65 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಈಗ ಶಾಸಕ ಕೆ.ಸಿ.ವೀರೇಂದ್ರ, ಗುಲ್ಷನ್ ಖಟ್ಟರ್ ಮತ್ತು ನೇಹಾ ಟಂಡನ್ ಸೇರಿದ 13 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ 23 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಪಿಎಂಎಲ್ಎ ಕಾಯಿದೆ-2002ರ ನಿಬಂಧನೆಗಳ ಅಡಿ 343 ಕೋಟಿ ರೂ.ಗಳ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.






