ಗಾಂಧಿಗ್ರಾಮ ಪುರಸ್ಕಾರ, ಇ-ಸ್ವತ್ತು ತಂತ್ರಾಂಶ ಚಾಲನೆ; 238 ಗ್ರಾ.ಪಂ.ಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಗ್ರಾಮೀಣ ಪ್ರದೇಶದ ಜನರ ಬೇಡಿಕೆಗಳ ಅನುಗುಣವಾಗಿ ಅಗತ್ಯ ಮೂಲ ಸೌಕರ್ಯಗಳನ್ನು ಮತ್ತು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು ಸ್ವಯಂ ಆಡಳಿತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾ.ಪಂ.ಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ರಾಜ್ಯದ ತಾಲೂಕಿಗೊಂದು ಉತ್ತಮ ಗ್ರಾ.ಪಂ. ಅನ್ನು ಆಯ್ಕೆ ಮಾಡಿ ಪ್ರತಿ ವರ್ಷವೂ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ.
ಪಂಚಾಯತಿಗಳಿಗೆ ಪುರಸ್ಕಾರವನ್ನು ನೀಡುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನೋಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಣೆಗೆ ಶ್ರಮಿಸಲು ಪ್ರೇರೇಪಿಸುವ ಮೂಲಕ ಪಂಚಾಯತಿಗಳನ್ನು ಸದೃಢಗೊಳಿಸಲು ಮತ್ತು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಸಹಕಾರಿಯಾಗುತ್ತದೆ.
ಪ್ರಶಸ್ತಿಗೆ ಮಾನದಂಡವಾಗಿ ಗ್ರಾ.ಪಂ.ಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನಕ್ಕೆ ಪಂಚಾಯತಿಗಳು ಕಾಯ್ದೆ ಬದ್ಧವಾಗಿ ನಿರ್ವಹಿಸಬೇಕು. ಪಂಚಾಯತಿಗಳು ಸ್ವಯಂ ಪ್ರೇರಣೆಯಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಚಟುವಟಿಕೆಗಳು, ಸರಕಾರ ರೂಪಿಸಿದ ಕಾರ್ಯಕ್ರಮಗಳ ನಿರ್ವಹಣೆಗೆ ಕೈಗೊಂಡ ಕ್ರಮವು ಒಳಗೊಂಡಂತೆ ಜೀವನದ ಗುಣಮಟ್ಟ, ಉತ್ತಮ ಆಡಳಿತ, ಸೇವೆಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳ ವಿಭಾಗಗಳ ಅಂಶಗಳನ್ನೊಳಗೊಂಡಂತೆ ಪ್ರಶ್ನಾವಳಿಗಳನ್ನು ಸರಕಾರದಿಂದ ಸಿದ್ಧಪಡಿಸಿ ಅಂಕಿ-ಅಂಶಗಳನ್ನು ಸಂಗ್ರಹಿಸಿ ಅವುಗಳ ಆಧಾರದ ಮೇಲೆ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ: ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಪಂಚಾಯತಿಗಳನ್ನು ಆಯ್ಕೆ ಮಾಡಲು ನಿಗದಿ ಪಡಿಸಿದ ಮಾನದಂಡಗಳನ್ನು ನಿಗದಿಪಡಿಸಿ, ರಾಜ್ಯದ ಎಲ್ಲ ಗ್ರಾ.ಪಂ.ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ತಂತ್ರಾಂಶದ ಮೂಲಕ ಉತ್ತರಿಸಿದ ವಿವರಗಳಿಗನುಗುಣವಾಗಿ ಪ್ರತಿ ತಾಲೂಕಿಗೆ ಅತಿಹೆಚ್ಚು ಅಂಕ ಗಳಿಸಿರುವ ಐದು ಪಂಚಾಯತಿಗಳು ಅರ್ಹತೆ ಪಡೆದಿದ್ದು, ಇಂತಹ ಪಂಚಾಯತಿಗಳ ಸ್ಥಳ ಪರಿಶೀಲನೆ ಹಾಗೂ ದಾಖಲಾತಿ ಪರಿಶೀಲನೆ ಮಾಡಿ, ಆಯಾ ಜಿ.ಪಂ. ಸಿಇಓಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾಮಟ್ಟದ ಆಯ್ಕೆ ಸಮಿತಿಯ ಮೂಲಕ ತಾಲೂಕಿಗೆ ಒಂದರಂತೆ ಪಂಚಾಯತಿಗಳನ್ನು ಆಯ್ಕೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಅಭಿವೃದ್ಧಿ ಕಾರ್ಯಗಳಿಗೆ ಪ್ರಶಸ್ತಿ ಮೊತ್ತ: ಗ್ರಾಮೀಣಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ರಾಜ್ಯಮಟ್ಟದ ಪರಾಮರ್ಶೆ ಸಮಿತಿಯ ಮೂಲಕ ಗ್ರಾಮಗಳನ್ನು ಅಂತಿಮಗೊಳಿಸಿ, ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪಂಚಾಯತಿಗಳಿಗೆ ಪ್ರಶಸ್ತಿ ಪ್ರಮಾಣಪತ್ರ, ಸ್ಮರಣಿಕೆ ಹಾಗೂ 5ಲಕ್ಷ ರೂ. ಪ್ರೋ ತ್ಸಾಹಧನವನ್ನು ನೀಡಿ ಗೌರವಿಸಲಾಗುತ್ತಿದೆ.
ಪ್ರಸ್ತುತ 2023-2024ನೆ ಸಾಲಿನಲ್ಲಿ ಆಯ್ಕೆ ಮಾಡಲಾದ ಒಟ್ಟು 238 ಗ್ರಾ.ಪಂ.ಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ವನ್ನು ಪ್ರದಾನ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ತಾಲೂಕುಗಳಿಂದ ಬರುವ ಪಂಚಾಯತಿ ಅಧ್ಯಕ್ಷರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಂದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಮೊತ್ತವನ್ನು ಗ್ರಾಮ ಪಂಚಾಯತಿಗಳು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾ.ಪಂ.ಗಳ ಸಂಪನ್ಮೂಲ ಹೆಚ್ಚಿಸುವ ಸಲುವಾಗಿ ಸರಕಾರದಿಂದ ಗ್ರಾ.ಪಂ.ಗಳ ಆಸ್ತಿಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲಾಗಿದೆ. ಪಂಚಾಯತಿಗಳ ವ್ಯಾಪ್ತಿಯಲ್ಲಿ ಗ್ರಾಮಠಾಣಾಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ವಾಸಿಸುವ ಜನರಿಗೆ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದು ಗ್ರಾ.ಪಂ.ಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತರಲಾಗಿದೆ.
ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ-ಸ್ವತ್ತು ಪಡೆಯಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಸುವರ್ಣಾವಕಾಶ ಕಲ್ಪಿಸಿದೆ. ತಂತ್ರಾಂಶದ ಮೂಲಕ ಗ್ರಾ.ಪಂ.ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ಡಿಜಿಟಲ್ ಇ-ಸ್ವತ್ತು ಪ್ರಮಾಣ ಪತ್ರ (ನಮೂನೆ- 11ಎ ಮತ್ತು ನಮೂನೆ 11ಬಿ) ವಿತರಣೆಯನ್ನು ಆರಂಭಿಸಲಾಗುತ್ತಿದೆ. ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಎಲ್ಲ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ-ಸ್ವತ್ತು ಸಹಾಯವಾಣಿ(ಸಂಖ್ಯೆ: 94834 76000) ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
‘ಗಾಂಧಿ ಗ್ರಾಮ ಪುರಸ್ಕಾರ, ಇ-ಸ್ವತ್ತು 2.0 ತಂತ್ರಾಂಶ’ಕ್ಕೆ ಇಂದು ಸಿಎಂ ಚಾಲನೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ 2023-24ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ ಮತ್ತು ಇ-ಸ್ವತ್ತು 2.0 ತಂತ್ರಾಂಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು(ಡಿ.1) ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸ್ಪೀಕರ್ ಯು.ಟಿ.ಖಾದರ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಹಿಸಲಿದ್ದಾರೆ. ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕ ರಿಝ್ವಾನ್ ಅರ್ಶದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗವಹಿಸಲಿದ್ದಾರೆ.







