ಡಿಸಿಇಟಿ-25: ತಿದ್ದುಪಡಿಗೆ ಜೂ.18, 19ರಂದು ಅವಕಾಶ

ಬೆಂಗಳೂರು : ಅಭ್ಯರ್ಥಿಗಳು ಡಿಸಿಇಟಿ-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನಮೂದಿಸಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಜೂ.18 ಅಥವಾ 19ರಂದು ಖುದ್ದು ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಅಭ್ಯರ್ಥಿಗಳು ಡಿಸಿಇಟಿ-2025ಕ್ಕೆ ಸಲ್ಲಿಸಿದ ಅರ್ಜಿ ಪ್ರತಿ, ಪ್ರವೇಶ ಪತ್ರ, ಪರಿಶೀಲನಾ ಪತ್ರ ಸೇರಿ ಅಗತ್ಯ ಎಲ್ಲ ಪ್ರಮಾಣ ಪತ್ರಗಳ ಎರಡು ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು. ಪರಿಶೀಲನೆಗೆ ಹಾಜರಾಗುವ ಮೊದಲು ಜೂ.16ರಂದು ಬುಕಿಂಗ್ ಮಾಡಿರಬೇಕು ಎಂದು ತಿಳಿಸಿದ್ದಾರೆ.
ನಿಗದಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದೇ ಇರುವವರು, ದಾಖಲೆಗಳು, ಕ್ಷೇಮುಗಳು, ಡಿಪ್ಲೊಮಾ ಪರೀಕ್ಷೆಯ ಅಂಕಗಳು, ವೃತ್ತಿನಿರತ ಕ್ಷೇಮುಗಳನ್ನು ಸರಿಯಾಗಿ ನಮೂದಿಸದವರು ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳಬಹುದು. ಎಲ್ಲ ಮಾಹಿತಿ ಸರಿ ಇರುವವರು ಕೆಇಎ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾಟಾ ಅಂಕ ನಮೂದು: ಡಿಪ್ಲೊಮಾ ಮೂಲಕ ಆರ್ಕಿಟೆಕ್ಟರ್ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ 2025ರ ನಾಟಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಜೂ.17 ಮತ್ತು 18ರಂದು ಪ್ರಾಧಿಕಾರದ ಪೋರ್ಟಲ್ ನಲ್ಲಿ ನಮೂದಿಸಬೇಕು ಎಂದು ಎಚ್.ಪ್ರಸನ್ನ ಸೂಚನೆ ನೀಡಿದ್ದಾರೆ.







