ಬಿಡದಿ ಟೌನ್ಶಿಪ್ ವಿರೋಧಿಸಿ ಮೇ 29ಕ್ಕೆ ‘ಬೈರಮಂಗಲ ಚಲೋ’

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರನ್ನು ಬೆಂಬಲಿಸಿ, ಬಿಡದಿ ಟೌನ್ಶಿಪ್ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆ ಹಿಂಪಡೆಯಲು ಆಗ್ರಹಿಸಿ ಮೇ 29ರಂದು ಬೈರಮಂಗಲ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ರೈತ ಸಂಘ ತಿಳಿಸಿದೆ.
ಸೋಮವಾರ ಹೇಳಿಕೆ ನೀಡಿರುವ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಬೈರಮಂಗಲ ಕ್ರಾಸ್ ಹಾರೋಹಳ್ಳಿ ಮುಖ್ಯರಸ್ತೆಯ ಅಬ್ಬನಕುಪ್ಪೆ ಬಿಎಂಟಿಸಿ ಬಸ್ ಡಿಪೋದಿಂದ ಮೇ 29ರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಮೆರವಣಿಗೆಯನ್ನು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ. ರವೀಂದ್ರನ್ ಉದ್ಘಾಟಿಸಲಿದ್ದಾರೆ. ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ, ಕೆಪಿಆರ್ಎಸ್ ರಾಜ್ಯಾಧ್ಯಕ್ಷ ಯು.ಬಸವರಾಜ, ಹಿರಿಯ ರೈತ ಮುಖಂಡ ಎನ್.ವೆಂಕಟಾಚಲಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯ ಸರಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಯೋಜನೆಗಾಗಿ ಸುಮಾರು 9,640 ಎಕರೆ ಕೃಷಿ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿ, ರಿಯಲ್ ಎಸ್ಟೇಟ್ ಪಟಾಲಂ ಅನ್ನು ಪ್ರಚೋದಿಸಿ ಹೋರಾಡುತ್ತಿರುವ ರೈತರನ್ನು ಬೆದರಿಸುತ್ತಾ ವಿವಿಧ ರೀತಿಯ ಕಿರುಕುಳ ಹಾಗೂ ದೌರ್ಜನ್ಯವನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಹೋರಾಟವನ್ನು ಬಲಪಡಿಸಲು ಹಾಗೂ ಹೋರಾಡುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೆಪಿಆರ್ಎಸ್ ಬೈರಮಂಗಲ ಚಲೋ ಹಮ್ಮಿಕೊಂಡಿದೆ ಎಂದು ಯಶವಂತ ಮಾಹಿತಿ ನೀಡಿದ್ದಾರೆ.






