ರೈತ ಉತ್ಪಾದಕ ಸಂಸ್ಥೆಗಳಿಗೆ 3 ಕೋಟಿ ರೂ.ಸಹಾಯಧನ : ಎನ್.ಚಲುವರಾಯಸ್ವಾಮಿ

ಬೆಂಗಳೂರು, ಅ.9: ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಬಲವರ್ಧನೆ ಯೋಜನೆ(ಪಿಎಂಎಫ್‍ಎಂಇ) ಅಡಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ(ಎಫ್‍ಪಿಒ) 3 ಕೋಟಿ ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಗುರುವಾರ ಪುರಭವನದಲ್ಲಿ ಆಯೋಜಿಸಿದ್ದ ‘ರೈತ ಉತ್ಪಾದಕ ಸಂಸ್ಥೆಗಳ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಸಾಮಾನ್ಯ ಮೂಲ ಸೌಕರ್ಯ ಸ್ಥಾಪನೆಗೆ ಶೇ.35 ಅಥವಾ ಗರಿಷ್ಠ 3 ಕೋಟಿ ರೂ. ಸಹಾಯಧನವನ್ನು ನೀಡಲಾಗುತ್ತಿದೆ. ಎಲ್ಲ ಎಫ್‍ಪಿಒಗಳು ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುಬೇಕು ಎಂದರು.
ಪಿಎಂಎಫ್‍ಎಂಇ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಸದಸ್ಯರು, ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ ಮುಖಾಂತರ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹಾಯಕಾರಿಯಾಗಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಂಡಿರುವವರ ಸಂಖ್ಯೆ ಬಹಳ ಕಡಿಮೆ ಇದೆ. ಹೀಗಾಗಿ ಯೋಜನೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರೈತ ಉತ್ಪಾದಕರ ಸಮ್ಮೇಳನವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ರಾಜ್ಯಮಟ್ಟದ ಈ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳ ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು, ಬ್ಯಾಂಕಿನ ಅಧಿಕಾರಿಗಳು ನಬಾರ್ಡ್ ಹಾಗು ವಿವಿಧ ವಿಷಯಗಳ ತಜ್ಞರು ಭಾಗವಹಿಸುತ್ತಿದ್ದು, ರೈತರು ಹಾಗು ಎಫ್‍ಪಿಒಗಳು ಇದರ ಅನುಕೂಲ ಪಡೆದುಕೊಂಡು ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು.
ಸರಕಾರದ ಯೋಜನೆಗಳ ಬಗ್ಗೆ ರೈತರಿಗೆ ಆಸಕ್ತಿ ಇದ್ದರಷ್ಟೇ ಅಂತಹ ಯೋಜನೆಗಳು ಯಶ್ವಸಿಯಾಗುತ್ತದೆ. ಕೃಷಿಯಿಂದ ಲಾಭ ಪಡೆಯುವ ಉದ್ದೇಶದಿಂದ ಸರಕಾರ ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಲಾಭ ಪಡೆಯುವ ಮೂಲಕ ರೈತ ಸಮುದಾಯ ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪೆಕ್ ಅಧ್ಯಕ್ಷ ಹರೀಶ್, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಜಂಟಿ ನಿರ್ದೇಶಕ ಡಾ.ಶಿವಕುಮಾರ್, ಅಶೋಕ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.







