ತೃತೀಯ ಲಿಂಗಿಗಳಿಗೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್‌ನಲ್ಲಿ ಶೇ.1 ಮೀಸಲಾತಿ; ಕೆಎಸ್‌ಎಲ್‌ಯು ಅಧಿಸೂಚನೆ

ಬೆಂಗಳೂರು : ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್ ಪ್ರವೇಶದಲ್ಲಿ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಶೇ.1 ಮೀಸಲಾತಿ ಕಲ್ಪಿಸಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಅಧಿಸೂಚನೆ ಹೊರಡಿಸಿದೆ.
ಜತೆಗೆ, ಈ ಅಭ್ಯರ್ಥಿಗಳ ಕನಿಷ್ಠ ಅರ್ಹತಾ ಅಂಕವನ್ನು ಶೇ.40ಕ್ಕೆ ಇಳಿಸಲಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ವಿಶೇಷ ಆದೇಶದ ಆಧಾರದಲ್ಲಿ ಕೆಎಸ್‌ಎಲ್‌ಯು 2026ರ ಸೆಪ್ಟೆಂಬರ್ 16ರಂದು ಪ್ರವೇಶ ಅಧಿಸೂಚನೆ ಹೊರಡಿಸಿದೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ (ಎನ್‌ಎಲ್‌ಎಸ್‌ಐಯು) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಕೆಎಸ್‌ಎಲ್‌ಯು ಪರ ವಕೀಲರು ಈ ಅಧಿಸೂಚನೆಯ ಮಾಹಿತಿ ನೀಡಿದ್ದಾರೆ. ಅದನ್ನು ದಾಖಲಿಸಿಕೊಂಡಿರುವ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ನಿಗದಿಪಡಿಸಿದೆ.
ಕಾನೂನು ಶಿಕ್ಷಣದಲ್ಲಿ ತೃತೀಯಲಿಂಗಿ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ 2026ರ ಜುಲೈ 20ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಅದರಂತೆ ಸೆಪ್ಟೆಂಬರ್ 15ರಂದು ಸರ್ಕಾರ ವಿಶೇಷ ಆದೇಶ ಹೊರಡಿಸಿದ್ದು, ಮರುದಿನವೇ ಕೆಎಸ್‌ಎಲ್‌ಯು ಪ್ರವೇಶ ಅಧಿಸೂಚನೆ ಪ್ರಕಟಿಸಿದೆ.
ಆದರೆ, ಈ ಮೀಸಲಾತಿಯ ಅನುಷ್ಠಾನವು ನ್ಯಾಯಾಲಯದ ಮುಂದಿನ ಆದೇಶ ಹಾಗೂ ಸರ್ಕಾರ ರೂಪಿಸಲಿರುವ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಕರಣದ ಪ್ರತಿವಾದಿಯಾಗಿರುವ ತೃತೀಯಲಿಂಗಿ ಅಭ್ಯರ್ಥಿ ಮುಗಿಲ್ ಅನ್ಬು ವಸಂತ್, ಅಧಿಸೂಚನೆ ಪ್ರಕಟವಾದ ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಗಡುವು ಮುಕ್ತಾಯಗೊಂಡಿದ್ದರಿಂದ ಸಮಯ ವಿಸ್ತರಿಸುವಂತೆ ಕೋರಿದರು. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಹಾಗೂ ಅಧಿಸೂಚನೆಯಲ್ಲಿ ಸೂಕ್ತ ರಕ್ಷಣೆಗಳನ್ನು ಒದಗಿಸಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಷ್ಟ್ರೀಯ ಕಾನೂನು ಶಾಲೆ ಸಲ್ಲಿಸಿರುವ ಮೇಲ್ಮನವಿಯಾಗಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಹೆಚ್ಚುವರಿ ನಿರ್ದೇಶನ ನೀಡಲು ನಿರಾಕರಿಸಿತು.
ಮುಗಿಲ್ ಅನ್ಬು ವಸಂತ್ ಅವರಿಗೆ ಬಿಎಂಎಸ್ ಕಾನೂನು ಕಾಲೇಜು ಮತ್ತು ಶೇಷಾದ್ರಿಪುರಂ ಕಾನೂನು ಕಾಲೇಜಿನಲ್ಲಿ ತಲಾ ಒಂದು ಸ್ಥಾನ ಕಾಯ್ದಿರಿಸಲು ಕೆಎಸ್‌ಎಲ್‌ಯು ಈಗಾಗಲೇ ಒಪ್ಪಿಗೆ ನೀಡಿರುವುದನ್ನೂ ನ್ಯಾಯಾಲಯ ದಾಖಲಿಸಿಕೊಂಡಿತು. ಮೆರಿಟ್ ಪಟ್ಟಿ ಪ್ರಕಟವಾಗುವ ವೇಳೆಗೆ ಅಭ್ಯರ್ಥಿಯು ಎರಡು ಕಾಲೇಜುಗಳ ಪೈಕಿ ಒಂದನ್ನು ಆಯ್ಕೆ ಮಾಡಬೇಕು, ಇಲ್ಲವಾದರೆ ಮತ್ತೊಂದು ಸ್ಥಾನ ರದ್ದಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.






