ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ: 35 ಮಂದಿಗೆ ಹೈ ಎಂಡ್ ಸೈಕಲ್‍ಗಳ ವಿತರಣೆ : ಡಾ.ಜಿ.ಪರಮೇಶ್ವರ್

ಬೆಂಗಳೂರು : ಕ್ರೀಡಾ ಇಲಾಖೆಯ ವತಿಯಿಂದ ಸುಮಾರು 35 ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅಂತರ್ ರಾಷ್ಟ್ರೀಯ ಕ್ರೀಡೆಗಳಲ್ಲಿ ಸ್ಪರ್ಧಿಸಲು ಅವಶ್ಯಕವಾಗಿರುವ ಹೈ ಎಂಡ್ ಸೈಕಲ್‍ಗಳನ್ನು ವಿತರಿಸಿದ್ದೇವೆ. ಇದರಿಂದ ಒಲಿಂಪಿಕ್ಸ್, ರಾಷ್ಟ್ರೀಯ-ಅಂತರ್‍ರಾಷ್ಟ್ರೀಯ ಕ್ರೀಡಾಕೂಟಗಳಿಗೆ ತರಬೇತಿ ಪಡೆಯಲು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ನಗರದ ನೃಪತುಂಗ ರಸ್ತೆಯ ಯುವನಿಕಾ ಸಭಾಂಗಣದ ಬಳಿ 35 ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹೈ ಎಂಡ್ ಸೈಕಲ್‍ಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಲಾ 14ಲಕ್ಷ ರೂ.ಮೌಲ್ಯದ ಸೈಕಲ್‍ಗಳನ್ನು ಒಬ್ಬ ಕ್ರೀಡಾಪಟುವಿಗೆ ವಿತರಿಸಿದ್ದೇವೆ. ವಿಜಯಪುರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸೈಕಲ್‍ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ಮೂಲಕ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪದಕಗಳನ್ನು ಗಳಿಸುವಂತೆ ತರಬೇತುದಾರರಿಗೆ ಇಲಾಖೆಯ ವತಿಯಿಂದ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗಾಗಿ ನಾವು ಮುಂಚಿತವಾಗಿಯೇ ಎನ್‍ಡಿಆರ್‍ಎಫ್ ಅನುದಾನವನ್ನು ಒಂದಿಷ್ಟಾ ದರೂ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಮತ್ತು ನಾನು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಅಗತ್ಯ ನೆರವು ನೀಡುವಂತೆ ಕೋರಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾನು ಹಾಗೂ ಎಲ್ಲ ಸಚಿವರು ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ನೀಡುತ್ತೇವೆ. ಆದರೆ ಅದಕ್ಕೂ ಮುನ್ನ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎನ್‍ಡಿಆರ್‍ಎಫ್‍ನಿಂದ ಮುಂಗಡ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.






