ಕಾರ್ಮಿಕರ ಹಕ್ಕು ಕಸಿಯುವ ಕೇಂದ್ರದ 4 ಸಂಹಿತೆಗಳನ್ನು ಹಿಂಪಡೆಯಿರಿ : ಕ್ಲಿಫ್ಟನ್.ಡಿ ರೊಝಾರಿಯೋ

ಬೆಂಗಳೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗಗಳ ಶ್ರಮವನ್ನು ದೋಚಿ, ಅವರ ಹಕ್ಕುಗಳನ್ನು ಕಸಿದು, ಬಂಡವಾಳಶಾಹಿಗಳ ಸಂಪತ್ತನ್ನು ಹೆಚ್ಚಿಸುವ ನೀತಿಗಳಾಗಿವೆ. ಆದ್ದರಿಂದ 4 ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆಯಬೇಕು ಎಂದು ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್.ಡಿ ರೋಝಾರಿಯೋ ಆಗ್ರಹಿಸಿದ್ದಾರೆ.
ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಎಐಸಿಸಿಟಿಯು ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಧರಣಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನ.21ರಂದು ಯಾವುದೇ ಪೂರ್ವ ಸೂಚನೆ, ಸಾರ್ವಜನಿಕ ಚರ್ಚೆ ಅಥವಾ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೇ, 4 ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ-2019, ಸಾಮಾಜಿಕ ಭದ್ರತಾ ಸಂಹಿತೆ-2020, ಕೈಗಾರಿಕಾ ಸಂಬಂಧಗಳ ಸಂಹಿತೆ-2020, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020 ಅನ್ನು ಏಕಾಏಕಿ ಜಾರಿಗೊಳಿಸುವ ಮೂಲಕ ಕಾರ್ಮಿಕರ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಹಕ್ಕುಗಳ ನಿರ್ಮೂಲನೆಗೆ, ವೇತನ ಇಳಿಕೆಗೆ, ಸಾಮಾಜಿಕ ಭದ್ರತೆಯ ನಷ್ಟಕ್ಕೆ, ಸಂಘಟನೆ ಸ್ವಾತಂತ್ರ್ಯ ನಾಶಕ್ಕೆ ಹಾಗೂ ಉದ್ಯೋಗ ಅಸ್ಥಿರತೆಗೆ ಕಾರಣವಾಗುತ್ತವೆ ಎಂದು ಖಂಡಿಸಿದರು.
ಎಐಸಿಸಿಟಿಯು ರಾಜ್ಯ ಪ್ರದಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಕೇಂದ್ರ ಸರಕಾರ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದು, ಈ ಕಾಯ್ದೆಗಳು ಅನುಷ್ಠಾನಗೊಂಡಲ್ಲಿ ಕಾರ್ಮಿಕರ ಬದುಕು ಇನ್ನಷ್ಟು ಪ್ರಪಾತಕ್ಕೆ ಬೀಳಲಿದೆ. ಈಗಾಗಲೇ ಕನಿಷ್ಠ ಕೂಲಿ, ಉದ್ಯೋಗ ಭದ್ರತೆ, ಸಂವಿಧಾನಬದ್ಧ ಹಕ್ಕುಗಳನ್ನು ಕಳೆದುಕೊಂಡಿರುವ ಕಾರ್ಮಿಕರು ನಿರುದ್ಯೋಗ, ಹಸಿವು, ಬಡತನ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಸಿಲುಕಲಿದ್ದಾರೆ. ಕಾರ್ಮಿಕರಿಗೆ ಇನ್ನಷ್ಟು ಬಲ ಒದಗಿಸಲಾಗಿದೆ ಎಂಬ ಸರಕಾರದ ಹೇಳಿಕೆ ವಾಸ್ತವಕ್ಕೆ ತದ್ವಿರುದ್ಧವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ 14 ದಿನಗಳ ಮುಂಚಿತ ಮುಷ್ಕರ ನೋಟಿಸ್ ಕಡ್ಡಾಯ ಮಾಡುವ ಮೂಲಕ ಹೋರಾಟದ ಹಕ್ಕಿನ ಮೇಲೆ ನೇರ ದಾಳಿ ಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಪಿ.ಪಿ.ಅಪ್ಪಣ್ಣ, ಹೋರಾಟಗಾರರಾದ ನಿರ್ಮಲಾ, ನಾಗರಾಜ ಪೂಜಾರ್, ಪುಟ್ಟಿಗೌಡ, ಪ್ರತಿಭಾ, ವಿಜಯಕುಮಾರ್, ಸಂತೋಷ ಗುಳೆದಟ್ಟಿ, ಪರುಶುರಾಮ ಸಂದೇರ್, ವಿನಯ್, ಮಾಯಮ್ಮ, ಕೆ. ನಾಗಲಿಸ್ವಾಮಿ, ವಿಜಯ್ ದೊರೆರಾಜು ಮತ್ತಿತರರು ಹಾಜರಿದ್ದರು.







