ಕೋಗಿಲು ಬಡಾವಣೆ ತೆರವು : 400 ಕುಟುಂಬಗಳಿಗೆ ಶಾಶ್ವತ ಮನೆ ನಿರ್ಮಿಸಲು ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹ

ಬೆಂಗಳೂರು : ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಜಿಬಿಎ ಅಧಿಕಾರಿಗಳ ಸಂವಿಧಾನ ವಿರೋಧಿ ನಡೆಯಿಂದಾಗಿ ಬದುಕು ಕಳೆದುಕೊಂಡ 400ಕ್ಕೂ ಹೆಚ್ಚು ಕುಟುಂಬಗಳ ನಿರ್ಗತಿಕರಿಗೆ ರಾಜ್ಯ ಸರಕಾರ ಅದೇ ಸ್ಥಳದಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಕಾರ್ಯದರ್ಶಿ ಕುಮಾರ್ ಸಮತಳ, ಬೆಂಗಳೂರು ಉತ್ತರ, ಯಲಹಂಕ ತಾಲೂಕು, ಕೋಗಿಲು ಗ್ರಾಮದ ಸರ್ವೇ ನಂಬರ್ 99ರ ಸರಕಾರಿ ಭೂಮಿಯಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವಸತಿ ರಹಿತರು ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡು ಸುಮಾರು 25-30 ವರ್ಷಗಳಿಂದ ವಾಸವಿದ್ದರು ಮತ್ತು ಸ್ಥಳದ ಮಂಜೂರಾತಿಗಾಗಿ 94ಸಿಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ, ಸರಕಾರದಿಂದ ತಾತ್ಕಾಲಿಕ ಹಕ್ಕುಪತ್ರಗಳನ್ನು ಪಡೆದಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ನಡುವೆ ಸುಳಿವು ನೀಡದೇ ನೀಡಿರುವ ತಾತ್ಕಾಲಿಕ ಹಕ್ಕುಪತ್ರಗಳನ್ನೂ ರದ್ದುಪಡಿಸಿದ್ದಾರೆ. ಅಲ್ಲಿನ ವಾಸಸ್ತರಿಗೆ ಮೂರು ತಿಂಗಳು ಮುಂಚಿತವಾಗಿ ಯಾವುದೇ ನೊಟೀಸನ್ನೂ ನೀಡದೇ, ಯಾವುದೇ ಮುನ್ಸೂಚನೆಯೂ ಇಲ್ಲದೆ, ಅಲ್ಲಿನ ಬಡ ಕುಟುಂಬಗಳು ಕೂಲಿನಾಲಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ ಆಹಾರ ಪದಾರ್ಥಗಳು, ಬಟ್ಟೆಬರೆ, ಗೃಹ ಬಳಕೆ ವಸ್ತುಗಳನ್ನು ತೆಗೆದುಕೊಳ್ಳಲೂ ಅವಕಾಶ ಕೊಡದೆ, ಉತ್ತರ ಪ್ರದೇಶದ ಬುಲ್ಡೋಜರ್ ಸರಕಾರದಂತೆ, ಜಿಬಿಎ ಅಧಿಕಾರಿಗಳು, ಪೊಲೀಸ್ ಬಲದೊಂದಿಗೆ ಏಕಾಏಕಿ ಮನೆಗಳನ್ನು ಧ್ವಂಸ ಮಾಡಿದ್ದಾರೆ ಎಂದು ಕುಮಾರ್ ಸಮತಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಸಚಿವರ ಸ್ವಕ್ಷೇತ್ರದಲ್ಲಿಯೇ ಇಂತಹ ಘೋರ ಹಾಗೂ ಅಮಾನವೀಯ ಕೃತ್ಯ ನಡೆದಿರುವುದು ಅತ್ಯಂತ ಶೋಚನೀಯ. ಈ ದುಷ್ಕೃತ್ಯದಿಂದಾಗಿ ನೆಲೆ ಕಳೆದುಕೊಂಡ ಬಡ ಕುಟುಂಬಗಳು ಮಕ್ಕಳು, ಮುದುಕರಾದಿಯಾಗಿ ಚಳಿ, ಗಾಳಿ, ಬಿಸಿಲೆನ್ನದೆ ಅಲ್ಲಿಯೇ ನಿರ್ವಸಿತರಾಗಿ ಪರಿತಪಿಸುವಂತಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ದುರುದ್ದೇಶಪೂರಿತ, ಪೂರ್ವಯೋಜಿತ ದುಷ್ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಬಲವಂತದ ತೆರವು ಕಾರ್ಯಾಚರಣೆಯಿಂದಾಗಿ ವಸತಿ ಕಳೆದುಕೊಂಡ ಎಲ್ಲ ಕುಟುಂಬಗಳಿಗೂ ಕೂಡಲೇ ವಾಸಯೋಗ್ಯ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಕೊಟ್ಟು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಪ್ರತಿ ತಿಂಗಳೂ ಸರಕಾರವೇ ಪೂರೈಸಬೇಕು ಎಂದು ಕುಮಾರ್ ಸಮತಳ ಆಗ್ರಹಿಸಿದ್ದಾರೆ.







