ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ | 425 ಕೋಟಿ ರೂ.ಹಣ ನೀರಿಗೆ ಹೋಮವಾಗದಿರಲಿ : ವಿಜಯೇಂದ್ರ

ಬೆಂಗಳೂರು : ‘ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಹಿಂದೆ ವ್ಯಯಿಸಿದ್ದ 165 ಕೋಟಿ ರೂ.ನಂತೆ ಈಗಿನ ಸಾಮಾಜಿಕ, ಶೈಕ್ಷಣಿಕ ಗಣತಿಗೆ 425 ಕೋಟಿ ರೂ.ಹಣ ನೀರಿಗೆ ಹೋಮವಾಗದಿರಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಮನವಿ ಮಾಡಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ 165 ಕೋಟಿ ರೂ.ವ್ಯಯಿಸಿ ಕಾಂತರಾಜು ಆಯೋಗ ನಡೆಸಿದ್ದ ಜಾತಿ ಗಣತಿಯನ್ನು 10 ವರ್ಷಗಳ ಹಳೆಯದು ಎಂಬ ಕಾರಣ ನೀಡಿ ಕಸದ ಬುಟ್ಟಿಗೆ ಹಾಕಿದೆ. ಇದೀಗ ಮತ್ತೆ 425 ಕೋಟಿ ರೂ.ವ್ಯಯಿಸಿ ಜಾತಿ ಗಣತಿ ನಡೆಸಲು ಮುಂದಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಸಿಎಂ ಅವರೇ, ಕಾಂತರಾಜು ಆಯೋಗದ ವರದಿಯಂತೆ ಇದೂ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸಾಧನವಾಗದಿರಲಿ. ಅತ್ಯಲ್ಪ ಅವಧಿಯಲ್ಲಿ 7ಕೋಟಿ ಜನರ ಸಮೀಕ್ಷಾ ವರದಿಯನ್ನು ತಯಾರಿಸುವುದಾಗಿ ಹೇಳಿದ್ದೀರಿ. ಆದರೆ, ಕೇವಲ ಪರಿಶಿಷ್ಟರ ಗಣತಿ ನಡೆಸಲು ನಾಗಮೋಹನ್ ದಾಸ್ ಆಯೋಗವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಪಡೆದಿತ್ತು, ಈಗ 7ಕೋಟಿ ಜನರ ಸಮೀಕ್ಷೆಯನ್ನು ತಾಂತ್ರಿಕತೆ ಬಳಸಿಯಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸಹಜವೇ ಎಂದು ವಿಜಯೇಂದ್ರ ಹೇಳಿದ್ದಾರೆ.







